ಮೈಸೂರು : ಚಾಮರಾಜ ಕ್ಷೇತ್ರದ ಮಾಜಿ ಶಾಸಕ ವಾಸು ಅವರನ್ನು ಕಾಂಗ್ರೆಸ್ ಪಕ್ಷದಿಂದ ವಜಾಗೊಳಿಸುವಂತೆ ಸಿಎಂ ಸಿದ್ದರಾಮಯ್ಯ ಅವರ ಬೆಂಬಲಿಗರಿಂದ ಆಗ್ರಹ ಕೇಳಿಬಂದಿದೆ.
ಡಿ.ಕೆ ಶಿವಕುಮಾರ್ ಸಿಎಂ ಆಗಲಿ ಎಂದು ಬಹಿರಂಗ ಹೇಳಿಕೆ ಕೊಟ್ಟಿದ್ದ ಮಾಜಿ ಶಾಸಕ ವಾಸುಗೆ ಚಾಮರಾಜ ಕ್ಷೇತ್ರದ ಟಿಕೆಟ್ ಕೈ ತಪ್ಪಿಸಿ ತಮ್ಮ ಬೆಂಬಲಿಗನಿಗೆ ಕೊಡಿಸುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದರು. ಇದೀಗ ವಾಸು ಅವರನ್ನ ಪಕ್ಷದಿಂದ ವಜಾ ಮಾಡುವಂತೆ ಸಿದ್ದರಾಮಯ್ಯ ಬೆಂಬಲಿಗ ಮೈಸೂರು ನಗರ ಕಾಂಗ್ರೆಸ್ ಅಧ್ಯಕ್ಷ ಆರ್. ಮೂರ್ತಿಗೆ ಪತ್ರ ಬರೆದಿದ್ದಾರೆ. ನಗರ ಪಾಲಿಕೆ ಮಾಜಿ ಸದಸ್ಯ ಆರ್. ಸುನಂದಕುಮಾರ್ ಪತ್ರ ಬರೆದಿದ್ದು ವಾಸು ಅವರನ್ನ ಪಕ್ಷದಿಂದ ವಜಾ ಮಾಡುವಂತೆ ಒತ್ತಾಯಿಸಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ವಾಸು ಪಕ್ಷ ವಿರೋಧಿ ಕೆಲಸ ಮಾಡಿದ್ದಾರೆ. ಕಾಂಗ್ರೆಸ್‌ನಲ್ಲಿ ಇದ್ದುಕೊಂಡೇ ಬಿಜೆಪಿ ಪರವಾಗಿ ಮತಯಾಚನೆ ಮಾಡಿದ್ದಾರೆ. ಕುರುಬರು ಹಾಗೂ ದಲಿತರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ತಮ್ಮ ಬೆಂಬಲಿಗರಿಗೆ ಹಣ ಕೊಟ್ಟು ಬಿಜೆಪಿ ಪರ ಕೆಲಸ ಮಾಡಿಸಿದ್ದಾರೆ. ಬಿಜೆಪಿಯಲ್ಲಿ ತಮ್ಮ ಮಗ ಸ್ಪರ್ಧಿಸಿದ್ದ ಕಾರಣ ಅವರ ಪರ ಕೆಲಸ ಮಾಡಿದ್ದಾರೆ. ಚಾಮರಾಜ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಕೆಲಸ ಮಾಡಿದ್ದು ಸಿದ್ದರಾಮಯ್ಯ ವಿರುದ್ಧವೂ ವಾಸು ಕೆಲಸ ಮಾಡಿದ್ದಾರೆ. ಹೀಗಾಗಿ ಅವರನ್ನ ಪಕ್ಷದಿಂದ ವಜಾ ಮಾಡುವಂತೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.