ಮೈಸೂರು : ಮೈಸೂರು ವಿಶ್ವವಿದ್ಯಾನಿಲಯಕ್ಕೆ ಫ್ರಾನ್ಸ್ ದೇಶದ ರಾಯಭಾರಿಗಳ ನಿಯೋಗ ಭೇಟಿ ನೀಡಿ ಫ್ರೆಂಚ್ ಭಾಷೆ ವಿಭಾಗವನ್ನು ಮರು ಆರಂಭಿಸುವ ಕುರಿತಂತೆ ಮಹತ್ವದ ಸಮಾಲೋಚನೆ ನಡೆಸಿದರು. ವಿವಿಯ ಕಾರ್ಯಸೌಧಕ್ಕೆ ಆಗಮಿಸಿದ ರಾಯಭಾರಿಗಳ ನಿಯೋಗವು ವಿವಿಯ ಕುಲಸಚಿವರಾದ ಎಂ.ಕೆ.ಸವಿತಾ ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ.
ಫ್ರಾನ್ಸ್‌ನಲ್ಲಿ ೧೦ ಸಾವಿರಕ್ಕೂ ಹೆಚ್ಚು ಭಾರತೀಯರು ವ್ಯಾಸಂಗ ಮಾಡುತ್ತಿದ್ದಾರೆ. ಅಲ್ಲಿ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಅವಕಾಶಗಳಿದ್ದು, ಹೀಗಾಗಿ ಇಲ್ಲಿನ ವಿದ್ಯಾರ್ಥಿಗಳಿಗೆ ಈ ಬಗ್ಗೆ ಮಾಹಿತಿ ನೀಡಬೇಕು ಎಂದು ನಿಯೋಗವು ಮನವಿ ಮಾಡಿದೆ.
ಇದನ್ನು ಓದಿ: ʼಗ್ಯಾರಂಟಿʼ ಜನರ ಬದುಕಿನ ಆಧಾರ
ವಿವಿಯಲ್ಲಿ ಫ್ರೆಂಚ್ ಭಾಷೆ ವಿಭಾಗ ಪುನಾರಂಭಿಸಲು ಚರ್ಚೆ ನಡೆಸಲಾಗಿದೆ. ಈ ಹಿಂದೆ ಮೈಸೂರು ವಿವಿಯಲ್ಲಿ ಫ್ರೆಂಚ್ ಸೇರಿದಂತೆ ಇತರೆ ವಿದೇಶಿ ಭಾಷೆಗಳ ವಿಭಾಗಗಳನ್ನು ತೆರೆದು ಕಲಿಕೆಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಕಾಲಕ್ರಮೇಣ ಬೋಧಕರ ಕೊರತೆಯಿಂದಾಗಿ ವಿಭಾಗವನ್ನು ಮುಚ್ಚಲಾಗಿದೆ. ಇದೀಗ ಮತ್ತೆ ಫ್ರೆಂಚ್ ಭಾಷೆ ವಿಭಾಗ ತೆರೆಯುವ ಬಗ್ಗೆ ನಿಯೋಗ ಚರ್ಚೆ ನಡೆಸಿದೆ.
ನಿಯೋಗಕ್ಕೆ ಇದೀಗ ಪ್ರಸ್ತಾವನೆ ನೀಡಲು ತಿಳಿಸಿದ್ದೇವೆ. ಅವರ ಕೋರಿಕೆ ಮೇರೆಗೆ ಚರ್ಚಿಸಿ, ಅದು ಒಪ್ಪಿಗೆಯಾದರೆ ಒಪ್ಪಂದಕ್ಕೆ ಸಹಿ ಮಾಡಲಾಗುತ್ತದೆ ಎಂದು ಕುಲಸಚಿವರಾದ ಎಂ.ಕೆ.ಸವಿತಾ ತಿಳಿಸಿದರು.
ಫ್ರಾನ್ಸ್ಪ್ರ ತಿನಿಧಿಗಳಾದ ಆಂಥೋನಿ ಗಿಲೈಟ್, ಜೀನ್ ಮಾರ್ಕ್ ಡಿಪೈರ್, ಥಾಮಸ್ ಚೌಮೌಂಟ್ ನಿಯೋಗದಿಂದ ಭೇಟಿ ನೀಡಿದ್ದರು. ಮೈಸೂರು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಎನ್.ನಾಗರಾಜ್, ಪ್ರಾಧ್ಯಾಪಕರಾದ ಪ್ರೊ.ಎಂ.ಎಸ್.ಸಪ್ನ, ವಿವಿಯ ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು ಹಾಜರಿದ್ದರು.





