ಮೈಸೂರು: ಆಷಾಢ ಮಾಸದಲ್ಲಿ ಚಾಮುಂಡಿಬೆಟ್ಟಕ್ಕೆ ಶುಕ್ರವಾರ, ವರ್ಧಂತಿ ದಿನದಂದು ಲಕ್ಷಾಂತರ ಜನರು ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ದರ್ಶನಕ್ಕೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವುದರ ಕುರಿತು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಸ್ಥಳ ಪರಿಶೀಲಿಸಿದರು.
ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಅವರೊಂದಿಗೆ ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಸ್ಥಾನ, ಮಹಿಷಾಸುರ ಪ್ರತಿಮೆ, ಪಾರ್ಕಿಂಗ್ ಸ್ಥಳ, ಬಸ್ ನಿಲ್ದಾಣ, ಭಕ್ತಾದಿಗಳು ಸಾಲಾಗಿ ನಿಲ್ಲುವ ಮಾರ್ಗಗಳಲ್ಲಿ ಪೊಲೀಸ್ ಭದ್ರತೆಗೆ ಮಾಡಿರುವ ಕ್ರಮಗಳ ಬಗ್ಗೆ ಪರಿಶೀಲಿಸಿ ಮಾಹಿತಿ ಪಡೆದರು.
ಭಕ್ತಾದಿಗಳು ನಿಲ್ದಾಣದಲ್ಲಿ ಇಳಿದು ನೇರವಾಗಿ ಕ್ಯೂನಲ್ಲಿ ಆಗಮಿಸಿ ದೇವಸ್ಥಾನ ಪ್ರವೇಶ ಮಾಡುವುದು. ವಿವಿಐಪಿಗಳಿಗೆ ಪ್ರತ್ಯೇಕ ಲೈನ್, ಕೌಂಟರ್‌ನಲ್ಲಿ ಟಿಕೆಟ್ ಖರೀದಿಸಿದವರು ನೇರವಾಗಿ ಹೋಗುವಂತೆ ಮಾಡಲು ಪ್ರತ್ಯೇಕ ಸಾಲು ಮಾಡಿರುವ ಬಗ್ಗೆ ವಿವರಿಸಲಾಯಿತು.
ಇದನ್ನೂ ಓದಿ:- ಇನ್ಮುಂದೆ ರಾಜ್ಯ ಸರ್ಕಾರದಿಂದಲೇ 108 AMBULANCEಗಳ ನಿರ್ವಹಣೆ: ಸಚಿವ ದಿನೇಶ್ ಗುಂಡೂರಾವ್
ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಜೆ.ರೂಪಾ ದೇವಸ್ಥಾನದಿಂದ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಿಸಿದರು. ನಂತರ, ದಾಸೋಹ ಭವನದಲ್ಲಿ ಅಧಿಕಾರಿಗಳ ಸಭೆ ನಡೆಸಿ ಅಗತ್ಯ ಸಿದ್ಧತೆಗಳನ್ನು ಈಗಿನಿಂದಲೇ ಶುರುಮಾಡುವಂತೆ ಸೂಚಿಸಿದರು.
ಡಿಸಿಪಿಗಳಾದ ಎಂ.ಮುತ್ತುರಾಜ್, ಕೆ.ಎಸ್.ಸುಂದರ್ ರಾಜ್ ಮತ್ತಿತರರು ಹಾಜರಿದ್ದರು.