ಮೈಸೂರು : ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಮಾಡಬೇಕು ಎಂದು ಒತ್ತಾಯಿಸಿ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ರಾಜ್ಯದಲ್ಲಿ ಹಿಂದೆ ಅಧಿಕಾರ ನಡೆಸಿದ ಬಿಜೆಪಿ ಸರ್ಕಾರ ಖಾಲಿ ಹುದ್ದೆಗಳ ಭರ್ತಿಗೆ ಕೋವಿಡ್ ಕಾರಣ ಹೇಳಿ ಯಾವುದೇ ಪ್ರಯತ್ನ ಮಾಡಲಿಲ್ಲ. ಬಿಜೆಪಿಯ ವೈಫಲ್ಯಗಳನ್ನು ಎತ್ತಿ ತೋರಿಸುತ್ತಾ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಭರವಸೆಯನ್ನು ನೀಡಿತ್ತು. ಆದರೆ, ಅಧಿಕಾರಕ್ಕೆ ಬಂ ದು ೨ ವರ್ಷ ೪ ತಿಂಗಳು ಕಳೆದರೂ ಒಳ ಮೀಸಲಾತಿ ಹೆಸರಿನಲ್ಲಿ ಯಾವುದೇ ನೇಮಕಾತಿಯನ್ನು ಮಾಡಿಲ್ಲ ಎಂದು ದೂರಿದರು.
ಖಾಲಿ ಇರುವ ಹುದ್ದೆಗಳನ್ನು ಗುತ್ತಿಗೆ, ಹೊರಗುತ್ತಿಗೆ ಆಧಾರದಲ್ಲಿ ತುಂಬಿಕೊಂಡು ಪುಡಿಗಾಸಿಗೆ, ಉದ್ಯೋಗ ಭದ್ರತೆ ನೀಡದೇ ದುಡಿಸಿಕೊಳ್ಳಲಾಗುತ್ತಿದೆ. ಕೂಲಿ-ನಾಲಿ ಮಾಡಿ ಪೋಷಕರು ಮಕ್ಕಳಿಗೆ ಕೋಚಿಂಗ್ ಕೊಡಿ ಸುತ್ತಿದ್ದಾರೆ. ಗಂಭೀರ ಸಮಸ್ಯೆಗಳನ್ನು ಯುವಜನರು ಎದುರಿಸುತ್ತಿದ್ದರೂ ಸರ್ಕಾರಗಳು ಈ ಬಗ್ಗೆ ಮಾನವೀಯವಾಗಿ ವರ್ತಿಸುತ್ತಿಲ್ಲ. ಈಗಲಾದರೂ ಯಾವುದೇ ನೆಪಗಳನ್ನು ಹೇಳದೆ ಖಾಲಿ ಹುದ್ದೆಗಳ ಭರ್ತಿಗೆ ಕೂಡಲೇ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ:-ರಂಗ ಕಲಾವಿದ, ಹಾಸ್ಯನಟ ರಾಜು ತಾಳಿಕೋಟೆ ನಿಧನ
ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿಯ ಸಂಚಾಲಕರಾದ ನೀತುಶ್ರೀ, ಸಹ ಸಂಚಾಲಕರಾದ ಆದರ್ಶ್, ರಕ್ಷಿತ್, ಗಿರೀಶ್, ಟಿ.ಆರ್.ಸುನಿಲ್, ಎಸ್.ಸುಮಾ, ರಣಜಿತ್, ಪೂರ್ಣಿಮಾ, ಅನಿಲ್, ಸಿಂಚನ, ಪೃಥ್ವಿ, ರಜತ್, ಅನುಷ, ನಂಜುಂಡ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಮುಖ ಹಕ್ಕೋತ್ತಾಯಗಳು
* ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಎಲ್ಲ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಶೀಘ್ರದಲ್ಲಿ ಭರ್ತಿ ಮಾಡಬೇಕು
* ನೇಮಕಾತಿಗಳಲ್ಲಿ ಅಕ್ರಮ ತಡೆಗಟ್ಟಿ, ಪಾರದರ್ಶಕತೆಯನ್ನು ಕಾಪಾಡಲು ಸೂಕ್ತಕ್ರಮ ಕೈಗೊಳ್ಳಬೇಕು
* ಎಲ್ಲಾ ನೇಮಕಾತಿಗಳಿಗೂ ಅರ್ಹ ವಯೋಮಿತಿಯನ್ನು ಕನಿಷ್ಠ ಐದು ವರ್ಷಗಳ ಸಡಿಲಿಕೆ ಮಾಡಬೇಕು
* ಪೊಲೀಸ್ ಕಾನ್‌ಸ್ಟೇಬಲ್ ವಯೋಮಿತಿಯನ್ನು ಸಾಮಾನ್ಯ ವರ್ಗ ೩೦, ಎಸ್‌ಸಿ, ಎಸ್‌ಟಿ, ಒಬಿಸಿ ವರ್ಗಕ್ಕೆ ೩೩ ವರ್ಷಗಳಿಗೆ ಹೆಚ್ಚಿಸಬೇಕು
* ಇತ್ತೀಚೆಗೆ ಕೆಇಎ ಹೊರಡಿಸಿರುವ ನೋಟಿಫಿಕೇಶನ್‌ನಲ್ಲಿ ನಿಗದಿಪಡಿಸಿರುವ ದುಬಾರಿ ಅರ್ಜಿ ಶುಲ್ಕವನ್ನು ಕೈಬಿಡಬೇಕು.





