ಮೈಸೂರು : ಜಿಲ್ಲೆಯಲ್ಲಿರುವ ಹಾಡಿಗಳಲ್ಲಿ ವಾಸವಾಗಿರುವ ಕುಟುಂಬಗಳಿಗೆ ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳನ್ನು ತಲುಪಿಸಿ, ಅವರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಿ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅಧ್ಯಕ್ಷರಾದ ಅರುಣ್ ಕುಮಾರ್ ಹೇಳಿದರು.
ಬುಧವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಾಡಿ ಜನರಿಗೆ ಆಧಾರ್ ಕಾಡ್೯ ಇಲ್ಲದಿದ್ದಲ್ಲಿ ನೊಂದಣಿ ಮಾಡುವ ಸಂದರ್ಭದಲ್ಲಿ ತಾಲ್ಲೂಕು ಮಟ್ಟದ ಬುಡಕಟ್ಟು ಅಧಿಕಾರಿ ಹಾಜರಿದ್ದು, ನೊಂದಣಿಯಿಂದ ಅರ್ಹರು ಬಿಟ್ಟುಹೋಗದಂತೆ ನೋಡಿಕೊಳ್ಳಿ ಎಂದರು.
ಸಾರ್ವಜನಿಕರಿಗೆ ಅನ್ನಭಾಗ್ಯ ಯೋಜನೆಯಡಿ ಪಡಿತರ ಅಂಗಡಿಗಳಲ್ಲಿ ನೀಡಲಾಗುವ ಪಡಿತರ ಗುಣಮಟ್ಟದಿಂದ ಕೂಡಿರಬೇಕು. ಅಧಿಕಾರಿಗಳು ದಿಢೀರ್ ಭೇಟಿ ನೀಡಿ ಗುಣಮಟ್ಟವನ್ನು ಪರಿಶೀಲಿಸಬೇಕು. ಕಳಪೆ ಗುಣಮಟ್ಟ ಕಂಡಬಂದಲ್ಲಿ ತಕ್ಷಣಕ ಕ್ರಮ ಕೈಗೊಳ್ಳಿ ಎಂದರು.
ಇದನ್ನು ಓದಿ: ಗ್ಯಾರಂಟಿ ಯೋಜನೆಗಳಿಂದಲೇ ರಾಜ್ಯದ ಜನತೆಯ ಮನಸ್ಸನ್ನು ಗೆಲ್ಲಲು ಸಾಧ್ಯವಿಲ್ಲ: ಕೆ.ಎನ್.ರಾಜಣ್ಣ
ತೂಕ ಮತ್ತು ಮಾಪನ ಇಲಾಖೆ ಅವರು ನ್ಯಾಯ ಬೆಲೆ ಪಡಿತರ ಅಂಗಡಿಗಳಿಗೆ ಭೇಟಿ ನೀಡಿ ಅಂಗಡಿ ಅವರು ಬಳಸುತ್ತಿರುವ ತೂಕದ ಯಂತ್ರ ಸರಿಯಾಗಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಿ ಎಂದು ತಿಳಿಸಿದರು.
ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಉಪಾಧ್ಯಕ್ಷ ಪ್ರೋ. ಶಿವಕುಮಾರ್ ಅವರು ಮಾತನಾಡಿ ಸರ್ಕಾರದ ನಡೆ ಹಾಡಿಗಳ ಕಡೆ ಎಂಬಂತೆ ಹಾಡಿಗಳಲ್ಲಿರುವ ಫಲಾನುಭವಿಗಳಿಗೆ ಯೋಜನೆಗಳು ತಲುಪಿದರೆ, ಕಟ್ಟಕಡೆಯ ಜನರಿಗೆ ಸರ್ಕಾರದ ಯೋಜನೆ ಸಾರ್ಥಕತೆ ಕಾಣುತ್ತದೆ ಎಂದರು.
ಗ್ಯಾರಂಟಿ ಯೋಜನೆಗಳ ಉಪಾಧ್ಯಕ್ಷ ಕರೀಗೌಡ ಅವರು ಮಾತನಾಡಿ ಮೃತಪಟ್ಟ ಗೃಹಲಕ್ಮ್ಮಿ ಫಲಾನುಭವಿಗಳಿಗೆ ಹಣ ಹೋಗದಂತೆ ಎಚ್ಚರಿಕೆ ವಹಿಸಿ. ಮರಣ ಪ್ರಮಾಣ ಪತ್ರ ಪಡೆದುಕೊಂಡು ತಕ್ಷಣ ಗೃಹಲಕ್ಷ್ಮಿ ಹಣವನ್ನು ತಡೆಯಾಗಬೇಕು ಎಂದರು.
ಇದನ್ನು ಓದಿ: ಡೆವಿಲ್ ಸಿನಿಮಾ ಬ್ಲಾಕ್ ಬಸ್ಟರ್ ಆಗಲಿ: ನಟ ದರ್ಶನ್‌ಗೆ ರಿಷಬ್ ಶೆಟ್ಟಿ ವಿಶ್
ಜಿಲ್ಲಾ ಗ್ಯಾರಂಟಿ ಯೋಜನೆಗಳ ಸದಸ್ಯ ಸಾ.ಮಾ.ಯೋಗೇಶ್ ಅವರು ಮಾತನಾಡಿ ಗೃಹ ಲಕ್ಷ್ಮಿ ಯೋಜನೆಯ 8434 ಮಹಿಳೆಯರು ಮೃತಪಟ್ಟಿದ್ದು, ಅವರ ಕುಟುಂಬದಲ್ಲಿ ಬೇರೆ ಮಹಿಳೆಯರು ಇದ್ದಲ್ಲಿ ಪಡಿತರ ಚೀಟಿಯಲ್ಲಿ ಮನೆಯ ಯಜಮಾನಿಯನ್ನು ಬದಲಾಯಿಸಿ ಅವರಿಗೆ ಗೃಹಲಕ್ಷ್ಮಿ ಯೋಜನೆಯನ್ನು ಒದಗಿಸಿ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯುಕೇಶ್ ಕುಮಾರ್ ಅವರು ಮಾತನಾಡಿ ಪಂಚ ಗ್ಯಾರಂಟಿ ಯೋಜನೆಯ 5 ಇಲಾಖೆಗಳು ಹಾಗೂ ಬುಡಕಟ್ಟು ಯೋಜನೆಗಳ ಇಲಾಖೆ ಅವರು ಒಟ್ಟಿಗೆ ಸೇರಿ ಹಾಡಿಗಳಿಗೆ ಭೇಟಿ ನೀಡಿ ಶಿಬಿರಗಳನ್ನು ನಡೆಸಿ ಅವರಿಗೆ ಗ್ಯಾರಂಟಿ ಯೋಜನೆಗಳನ್ನು ಒದಗಿಸುವುದರ ಜೊತೆಗೆ ಬೇರೆ ಸರ್ಕಾರದ ಯೋಜನೆಗಳನ್ನು ಒದಗಿಸಿಕೊಡಿ ಎಂದರು.
ಸಭೆಯಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಸದಸ್ಯರಾದ ಹುಣಸೂರು ಬಸವಣ್ಣ, ಕುಮಾರಿ ಲಲಿತಾ, ಅಬ್ದುಲ್ ಖಾದರ್, ಚಲುವರಾಜು, ಎಂ.ಎಸ್. ಮಹದೇವ್, ಉದಯ್ ಶಂಕರ್, ಚಾಮರಾಜು, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಪ್ರಭುಸ್ವಾಮಿ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.





