ಮೈಸೂರು : ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಜಾರಿಗೆ ಮೀನಾಮೇಷ ಎಣಿಸುತ್ತಿರುವ ಸರ್ಕಾರದ ವಿಳಂಬ ನೀತಿ ಖಂಡಿಸಿ, ಆ.1 ರಂದು ರಾಜ್ಯಾದ್ಯಂತ ಎಲ್ಲಾ ಜಿಲ್ಲೆ, ತಾಲ್ಲೂಕುಗಳಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಸಂಸದ ಗೋವಿಂದ ಕಾರಜೋಳ ತಿಳಿಸಿದರು.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಆಶ್ವಾಸನೆಯಂತೆ ಮಾದಿಗರಿಗೆ ಒಳ ಮೀಸಲಾತಿ ಕಲ್ಪಿಸದೆ, ಅಧಿಕಾರಕ್ಕೆ ಬಂದು ಎರಡು ವರ್ಷ ಕಳೆದರೂ ಒಳ ಮೀಸಲಾತಿ ಜಾರಿಗೆ ಮೀನಾ ಮೇಷ ಎಣಿಸುತ್ತಿದೆ. ಸರ್ಕಾರದ ಈ ವಿಳಂಬ ನೀತಿಯಿಂದ ಬೇಸತ್ತು ಅನಿವಾರ್ಯವಾಗಿ ಮಾದಿಗ ಸಮುದಾಯದವರು ಹೋರಾಟ ನಡೆಸಬೇಕಾಗಿದೆ ಎಂದರು.
ಆಂಧ್ರಪ್ರದೇಶ ಸರ್ಕಾರ 2005 ರಲ್ಲೇ ಒಳ ಮೀಸಲಾತಿ ಜಾರಿಗೆ ತಂದಿದೆ. ನಂತರ ಆಯಾ ರಾಜ್ಯಗಳು ಒಳ ಮೀಸಲಾತಿಯನ್ನು ಆಯಾಯ ಕಾಲಕ್ಕೆ ತಕ್ಕಂತೆ ನೀಡಬೇಕೆಂದು ಸರ್ವೋಚ್ಚ ನ್ಯಾಯಾಲಯದ ಆದೇಶವೇ ಇದೆ. ಆದರೂ ರಾಜ್ಯ ಕಾಂಗ್ರೆಸ್ ಸರ್ಕಾರ ಈ ವಿಷಯದಲ್ಲಿ ನಿರ್ಲಕ್ಷ್ಯ ತೋರಿದೆ. ಈ ಕಾರಣದಿಂದ ಈಗ ಹೋರಾಟ ನಡೆಸಲಾಗುತ್ತಿದೆ. ನಂತರದ ದಿನಗಳಲ್ಲಿ ಮಾದಿಗರ ಒಳ ಮೀಸಲಾತಿಗಾಗಿ ರಾಜ್ಯಾದ್ಯಂತ ಅಸಹಕಾರ ಚಳವಳಿ ಆರಂಭಿಸಲಾಗುವುದು ಎಂದು ಹೇಳಿದರು.
ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮೂರು ತಿಂಗಳ ಒಳಗೆ ಒಳ ಮೀಸಲಾತಿ ಜಾರಿಗೊಳಿಸದಿದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವೆ ಎಂದಿದ್ದರು. ಸರ್ಕಾರ ಮಾತಿಗೆ ತಪ್ಪಿರುವುದರಿಂದ ಈಗ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ನಮ್ಮೊಂದಿಗೆ ಚಳವಳಿಗೆ ಬರಲಿ ಎಂದು ಒತ್ತಾಯಿಸಿದರು.
ಒಳ ಮೀಸಲಾತಿಗೆ ಜಾರಿಗೆ ಮೀನಾ ಮೇಷ ಎಣಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವ ಬಾಯಿಯಿಂದ ನಮ್ಮದು ನುಡಿದಂತೆ ನಡೆಯುವ ಸರ್ಕಾರ ಎನ್ನುತ್ತಿದ್ದಾರೆ ಎಂದು ಪ್ರಶ್ನಿಸಿದ ಅವರು, ಒಳ ಮೀಸಲಾತಿ ಜಾರಿಯಿಂದ ಲಂಬಾಣಿ, ಭೋವಿ, ಕೊರಮ, ಕೊರಚ ಸಮುದಾಯಗಳ ಮೀಸಲಾತಿಗೆ ಯಾವುದೇ ತೊಡಕಿಲ್ಲ ಎಂದರು.
ಕೇಂದ್ರದ ಮಾಜಿ ಸಚಿವ ಎ.ನಾರಾಯಣಸ್ವಾಮಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದುಳಿದ, ಶೋಷಿತ ವರ್ಗಗಳ ನೇತಾರ ಎಂದು ಕರೆಸಿಕೊಳ್ಳುತ್ತಾರೆ. ಚುನಾವಣೆ ಸಂದರ್ಭದಲ್ಲಿಯೂ ಮಾದಿಗರಿಗೆ ಒಳ ಮೀಸಲಾತಿ ಭರವಸೆ ನೀಡಿದ್ದರು. ಆದರೆ ಸಿದ್ದರಾಮಯ್ಯ ಅವರಾಗಲಿ, ಸಚಿವ ಸಂಪುಟದ ಸದಸ್ಯರಾಗಲಿ ಯಾರೂ ಒಳ ಮೀಸಲಾತಿ ಬಗ್ಗೆ ಮಾತನಾಡುತ್ತಿಲ್ಲ ಎಂದು ಕಿಡಿಕಾರಿದರು.
ಆ.೧ರಂದು ರಾಜ್ಯಾದ್ಯಂತ ನಡೆಯುವ ಪ್ರತಿಭಟನೆಗೆ ಸರ್ಕಾರ ಮನ್ನಣೆ ಕೊಡದಿದ್ದರೆ ಆ.16 ರ ನಂತರ ಉಗ್ರವಾದ ಅಸಹಕಾರ ಚಳವಳಿ ನಡೆಯಲಿದೆ. ಮುಂದಿನ ದಿನಗಳಲ್ಲಿ ಸರ್ಕಾರಿ ಕಚೇರಿಗಳನ್ನು ಬಂದ್ ಮಾಡಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಹಿರಿಯ ವಕೀಲರಾದ ದಾಸಯ್ಯ, ಅರುಣ್ ಕುಮಾರ್, ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ರಮೇಶ್, ಮಾದಿಗ ಸಮುದಾಯದ ಮುಖಂಡರಾದ ಅರಕಲಗೂಡು ನಾಗೇಂದ್ರ, ಮಧು, ಧರ್ಮರಾಜ್, ಕಿರಣ್, ವಿಷ್ಣು ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.





