ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಿನ್ನೆ(ಡಿ.25) ಸಂಜೆ ಅರಮನೆ ಮುಂಭಾಗ ಬಲೂನ್ಗೆ ಗ್ಯಾಸ್ ತುಂಬುವಾಗ ಹೀಲಿಯಂ ಸಿಲಿಂಡರ್ ಸ್ಫೋಟಗೊಂಡು ಓರ್ವ ಸಾವನ್ನಪ್ಪಿ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಅರಮನೆಯ ಜಯ ಮಾರ್ತಾಂಡ ದ್ವಾರದ ಬಳಿ ಈ ದುರ್ಘಟನೆ ಸಂಭವಿಸಿದ್ದು, ಫುಟ್ಪಾತ್ನಲ್ಲಿ ಹೀಲಿಯಂ ಬಲೂನ್ ಮಾರುವ ವ್ಯಾಪಾರಿ ಸೈಕಲ್ನಲ್ಲಿ ವ್ಯಾಪಾರ ಮಾಡ್ತಿದ್ದ. ಈ ವೇಳೆ ಹೀಲಿಯಂ ಬಲೂನ್ ಸಿಲಿಂಡರ್ ಏಕಾಏಕಿ ಸ್ಫೋಟಗೊಂಡಿದೆ. ಪಕ್ಕದಲ್ಲೇ ಇದ್ದ ಬಲೂನ್ ವ್ಯಾಪಾರಿ ದೇಹ ಛಿದ್ರಛಿದ್ರವಾಗಿದೆ.
ಇನ್ನು ಸ್ಥಳದಲ್ಲೇ ನಿಂತಿದ್ದ ಐದು ಮಂದಿ ಗಾಯಗೊಂಡಿದ್ದಾರೆ. ಕ್ರಿಸ್ಮಸ್ ರಜೆ ಹಿನ್ನೆಲೆಯಲ್ಲಿ ಮೈಸೂರು ಅರಮನೆ ವೀಕ್ಷಣೆಗೆ ಹೆಚ್ಚು ಜನ ಆಗಮಿಸಿದ್ರು. ಈ ವೇಳೆಯೆ ಈ ದುರ್ಘಟನೆ ನಡೆದಿದೆ.
ಇದನ್ನು ಓದಿ: ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ: ಎಲ್ಲ ನಟರ ಅಭಿಮಾನಿಗಳು ಪೈರೆಸಿ ವಿರುದ್ಧ ಸಮರ ಸಾರುವಂತಾದರೆ!
ಇನ್ನು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗುರುತು ಪತ್ತೆ ಹಚ್ಚಿದ್ದಾರೆ.
ಗುರುತು ಪತ್ತೆ
ಹೀಲಿಯಂ ಸಿಲಿಂಡರ್ ಸ್ಫೋಟ ಪ್ರಕರಣದಲ್ಲಿ ಮೃತಪಟ್ಟ ಬಲೂನ್ ವ್ಯಾಪಾರ 40 ವರ್ಷ ವಯಸ್ಸಿನ ಸಲೀಂ ಎಂದು ಗುರುತಿಸಲಾಗಿದೆ. ಇವರು ಉತ್ತರ ಪ್ರದೇಶದ ಕನೋಜ್ ಜಿಲ್ಲೆಯ ತೋಫಿಯಾ ಗ್ರಾಮದವರು ಎನ್ನಲಾಗಿದೆ. ಈತನ ವಿರುದ್ಧ ಇದೀಗ ಎಫ್ಐಆರ್ ದಾಖಲಾಗಿದೆ.
ಘಟನೆಯಲ್ಲಿ ಐವರಿಗೆ ಗಂಭೀರ ಗಾಯಗಳಾಗಿದ್ದು ಕೆ.ಆರ್.ಆಸ್ಪತ್ರೆ ಹಾಗೂ ಜೆಎಸ್ಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಲ್ಲಿ ಬೆಂಗಳೂರು ಮೂಲದ 45 ವರ್ಷದ ಲಕ್ಷ್ಮಿ ಎಂಬುವರ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳು ಲಕ್ಷ್ಮಿ ಮೈಸೂರಿನ ಸಂಬಂಧಿಕರ ಮನೆಗೆ ಬಂದಿದ್ದರು. ನಂಜನಗೂಡು ಮೂಲದ ಮಂಜುಳಾ, ಕೊಲ್ಕತ್ತಾ ಮೂಲದ ಶಹನಾಜ್ ಶಬ್ಬೀರ್, ರಾಣೇಬೆನ್ನೂರು ಮೂಲದ ಕೊಟ್ರೇಶ್ ಗುಟ್ಟೆ ಗಾಯಗೊಂಡಿದ್ದು, ಚಿಕಿತ್ಸೆ ಮುಂದುವರಿದಿದೆ.





