Mysore
19
few clouds

Social Media

ಸೋಮವಾರ, 29 ಡಿಸೆಂಬರ್ 2025
Light
Dark

ಸಿಲಿಂಡರ್‌ ಸ್ಫೋಟ ಪ್ರಕರಣ : ತನಿಖೆ ತೀವ್ರ ; ಮೈಸೂರಲ್ಲಿ ಖಾಕಿ ಕಟ್ಟೆಚ್ಚರ

ಮೈಸೂರು : ಗುರುವಾರ ಸಂಜೆ ಮೈಸೂರಿನ ಅಂಬಾವಿಲಾಸ ಅರಮನೆ ಮುಂಭಾಗ ಸಂಭವಿಸಿದ ಹಿಲೀಯಂ ಸಿಲಿಂಡರ್ ಸ್ಪೋಟ ಪ್ರಕರಣ ಸಂಬಂಧ ನಗರದ ಪೊಲೀಸರು ಶನಿವಾರ ಮತ್ತಷ್ಟು ಮಾಹಿತಿ ಕಲೆ ಹಾಕಿದ್ದು, ತನಿಖೆಯನ್ನು ತೀವ್ರಗೊಳಿಸಿದ್ದಾರೆ.

ತನಿಖೆ ಮಾಹಿತಿಯನ್ನು ಎನ್‌ಐಎ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಶೀಘ್ರವೇ ವರದಿ ಸಲ್ಲಿಸಲಿದ್ದಾರೆ. ಘಟನೆಯಲ್ಲಿ ಮೃತಪಟ್ಟಿರುವ ಸಲೀಂ, ಇಲ್ಲಿಗೆ ಬರುವ ಮುನ್ನ ಉತ್ತರಪ್ರದೇಶ, ಹೈದರಾಬಾದ್‌ನಲ್ಲಿ ಬಲೂನ್ ಮಾರಾಟ ಮಾಡಿದ್ದನು. ಕಳೆದ ತಿಂಗಳಷ್ಟೇ ಆತ ಮೈಸೂರಿಗೆ ಬಂದಿದ್ದ ಬಲೂನ್ ಮಾರಾಟ ಸೇರಿದಂತೆ ಸಣ್ಣಪುಟ್ಟ ವಸ್ತುಗಳ ಮಾರಾಟ ಆತನ ಕಾಯಕ.

ಸಲೀಂ ಜೊತೆ ಬಂದಿದ್ದ ಸ್ನೇಹಿತರಾದ ರಿಜ್ವಾನ್ ಅಲಿಯಾಸ್ ರಾಜು ಹಾಗೂ ಹುಸೇನ್ ಅಲಿಯಾಸ್ ಸಿಂಗ್, ಸುನೀಲ್ ಸಿಂಗ್ ಅವರುಗಳಿಂದ ಪೊಲೀಸರು ಸಂಪೂರ್ಣ ಮಾಹಿತಿ ಕಲೆ ಹಾಕಿದ್ದು ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಲಿದ್ದಾರೆ.

ಘಟನೆ ಕುರಿತು ಮಾತನಾಡಿರುವ ಸುನ್ನಿಚೌಕದ ಷರೀಫ್ ಲಾಡ್ಜ್ ಮಾಲೀಕ ಅಮಾನ್, ಸಲೀಂ ಹಾಗೂ ಅವರ ಸಂಬಂಧಿಕರು ಹಲವಾರು ವರ್ಷದಿಂದ ಮೈಸೂರಿಗೆ ಬರುತ್ತಿದ್ದರು. ದಸರಾ, ಹಬ್ಬ ಹರಿದಿನಗಳಲ್ಲಿ ಬರುತ್ತಿದ್ದರು. ಒಬ್ಬರಿಗೆ ಒಂದು ದಿನಕ್ಕೆ ನೂರು ರೂಪಾಯಿಯ ಬಾಡಿಗೆಯಲ್ಲಿ ಕೊಠಡಿ ಕೊಡುತ್ತಿದ್ದೆವು ಎಂದಿದ್ದಾರೆ.

ಒಂದೇ ಕೊಠಡಿಯಲ್ಲಿ ನಾಲ್ವರು ಉಳಿದುಕೊಳ್ಳುತ್ತಿದ್ದರು. ಒಮ್ಮೊಮ್ಮೆ ಎರಡು ಕೊಠಡಿಯಲ್ಲಿ ನಾಲ್ವರು ಇರುತ್ತಿದ್ದರು. ವ್ಯಾಪಾರವಾದರೆ ಆ ಹಣವನ್ನು ಕೊಡುತ್ತಿದ್ದರು. ಇಲ್ಲವಾದರೆ ಅದನ್ನೂ ಅವರು ಕೊಡುತ್ತಿರಲಿಲ್ಲ. ನಾವು ಕೂಡ ಹಣಕ್ಕಾಗಿ ಒತ್ತಾಯ ಮಾಡುತ್ತಿರಲಿಲ್ಲ ಎಂದು ವಿಚಾರಣೆ ವೇಳೆ ತಿಳಿಸಿದ್ದಾರೆ.

ಅವರುಗಳು ಸೈಕಲ್ ಮೂಲಕವೇ ಸಂಚರಿಸುತ್ತಿದ್ದರು. ಸೈಕಲ್ ಇಲ್ಲೇ ಇರುತ್ತಿದ್ದವು. ಬಲೂನ್ ಮಾರಿದ ಮೇಲೆ ಸೈಕಲ್ ಬಿಟ್ಟು ಹೋಗುವುದು, ಬರುವುದು ಮಾಡುತ್ತಿದ್ದರು. ಸಿಲಿಂಡರ್‌ಗಳನ್ನು ಶೆಡ್‌ಗಳಲ್ಲಿ ಬಾಡಿಗೆಗೆ ಇಟ್ಟು ಬರುತ್ತಿದ್ದರು. ಯಾವತ್ತೂ ಲಾಡ್ಜ್ ಬಳಿಗೆ ಅವರು ತರುತ್ತಿರಲಿಲ್ಲ ಎಂದು ತಿಳಿಸಿದ್ದಾರೆ.

ಲಾಡ್ಜ್‌ಗಳ ಮೇಲೆ ಪೊಲೀಸರ ನಿಗಾ  

ಗ್ಯಾಸ್ ಸಿಲಿಂಡರ್ ಸೋಟ ಪ್ರಕರಣ ಬೆನ್ನಲ್ಲೆ ನಗರದ ಎಲ್ಲಾ ಲಾಡ್ಜ್‌ಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು, ಬೇರೆಡೆಯಿಂದ ಬರುವ ವ್ಯಕ್ತಿಗಳ ಮಾಹಿತಿ ಪಡೆದು ಕೊಠಡಿ ಕೊಡುವಂತೆ ಲಾಡ್ಜ್ ಮಾಲೀಕರಿಗೆ ಸೂಚನೆ ನೀಡಿದ್ದಾರೆ.

ಆಧಾರ್ ಕಾರ್ಡ್ ಅಥವ ಇನ್ನಿತರ ಗುರುತಿನ ಚೀಟಿ ಇಲ್ಲದೆ ರೂಮ್ ಕೊಡುವ ಲಾಡ್ಜ್‌ಗಳ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದು, ಲಾಡ್ಜ್‌ಗಳಲ್ಲಿ ಅಕ್ರಮವಾಗಿ ಉಳಿದುಕೊಂಡಿರುವವರ ಮೇಲೆ ನಿಗಾ ಇಟ್ಟಿದ್ದಾರೆ. ಹೊಸ ವರ್ಷದ ಹಿನ್ನಲೆಯಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

Tags:
error: Content is protected !!