Mysore
23
overcast clouds
Light
Dark

ಖಾಸಗಿ ಶಾಲೆ ಶುಲ್ಕಕ್ಕೆ ಕಡಿವಾಣ ಹಾಕಿ: ಮಾಲವಿಕ ಗುಬ್ಬಿವಾಣಿ

ಮೈಸೂರು: ಖಾಸಗಿ ಶಾಲೆಗಳು ಶೈಕ್ಷಣಿಕ ಶುಲ್ಕವನ್ನು ಹೆಚ್ಚಿಸುವ ಮೂಲಕ ಪೋಷಕರ ಬಳಿ ಹಣ ಲೂಟಿ ಮಾಡುತ್ತಿದ್ದಾರೆ. ಇದಕ್ಕೆ ಸರ್ಕಾರ ಕೂಡಲೇ ಕಡಿವಾಣ ಹಾಕಬೇಕು ಎಂದು ಆಮ್‌ಆದ್ಮಿ ಪಕ್ಷದ ರಾಜ್ಯ ಕಾರ್ಯದರ್ಶಿ ಮಾಲವಿಕ ಗುಬ್ಬಿವಾಣಿ ಒತ್ತಾಯಿಸಿದರು.

ಇಂದು(ಮೇ.೧೩) ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ  ಮಾತನಾಡಿದ ಅವರು, ಮುಖ್ಯಮಂತ್ರಿ ಅರವಿಂದ ಕೇಜ್ರವಾಲ್ ಅವರು ದೆಹಲಿಯಲ್ಲಿ ಖಾಸಗಿ ಶಾಲೆಗಳು ಮನಸೋ ಇಚ್ಚೆ ಶುಲ್ಕ ವಿದಿಸದಂತೆ ಕಟ್ಟುನಿಟ್ಟಿನ ನಿಯಂತ್ರಣ ಹೇರಿದ್ದಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಪೋಷಕರ ಈ ಅಸಹಾಯಕ ಅನಿವಾರ್ಯತೆಯನ್ನು ದುರುಪಯೋಗ ಪಡಿಸಿಕೊಂಡು ವರ್ಷದಿಂದ ವರ್ಷಕ್ಕೆ ಶೈಕ್ಷಣಿಕ ಶುಲ್ಕವನ್ನು ಹೆಚ್ಚಿಸುವ ಮೂಲಕ ಸುಲಿಗೆ ಮಾಡುತ್ತಿದ್ದು ಸರ್ಕಾರ ಕೂಡಲೆ ಖಾಸಗಿ ಶಾಲೆಗಳ ಶುಲ್ಕದಂದೆಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.

ಸರ್ಕಾರಿ ಶಾಲೆಗಳಲ್ಲಿನ ಕಳಪೆ ಗುಣಮಟ್ಟದ ಶಿಕ್ಷಣ ಮತ್ತು ಮೂಲಭೂತ ಸೌಕರ್ಯಗಳ ಕೊರತೆಯ ಕಾರಣದಿಂದ ಪೋಷಕರು ಅನಿವಾರ್ಯವಾಗಿ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿಯೇ ಗುಣಮಟ್ಟದ ಶಿಕ್ಷಣ ನೀಡಿದರೆ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಲು ಮುಂದಾಗುತ್ತಾರೆ ಎಂದರು.

ಸರ್ಕಾರಿ ಶಾಲೆಗಳಲ್ಲಿಯೇ ಸಕಲ ಸೌಕರ್ಯಗಳೊಂದಿಗೆ ಉತ್ತಮ ಗುಣಮಟ್ಟದ ಶಿಕ್ಷಣ ದೊರಕುವಂತೆ ಮಾಡಿ, ಅಲ್ಲಿನ ಪೋಷಕರು ತಮ್ಮ ಮಕ್ಕಳನ್ನು ಮರಳಿ ಸರ್ಕಾರಿ ಶಾಲೆಗೆ ಸೇರಿಸುವಂತೆ ಶೈಕ್ಷಣಿಕ ಕ್ರಾಂತಿಯನ್ನು ಆಮ್‌ ಆದ್ಮಿ ಪಕ್ಷದ ನಾಯ ಅರವಿಂದ್‌ ಕ್ರೇಜೀವಾಲ್‌ ಮಾಡಿ ತೋರಿಸಿದ್ದಾರೆ.

ಆದರೆ ಕರ್ನಾಟಕ ಸರ್ಕಾರ ರಾಜ್ಯದ ಶೈಕ್ಷಣಿಕ ಪ್ರಗತಿಗೆ ಸೂಕ್ತಕ್ರಮ ವಹಿಸದೆ ಕೈಕಟ್ಟಿ ಕುಳಿತಿದೆ. ಈಗಲಾದರೂ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಚ್ಚೆತ್ತುಕೊಂಡು ಶಿಕ್ಷಣ ತಜ್ಞರ ಜೊತೆ ಚರ್ಚಿಸಿ ಶಿಕ್ಷಣದ ಗುಣಮಟ್ಟ, ಶಿಕ್ಷಕರ ನೇಮಕ ಮತ್ತು ಸೂಕ್ತ ಕೊಠಡಿ ಮತ್ತಿತರ ಸೌಲಭ್ಯಗಳು ಸೇರಿದಂತೆ ಎಲ್ಲಾ ಆಯಾಮಗಳಿಂದಲೂ ಸರ್ಕಾರಿ ಶಾಲೆಗಳ ಸಭಲೀಕರಣಕ್ಕೆ ಮುಂದಾಗಬೇಕು ಎಂದರು.

ಅಲ್ಲದೇ ಶಿಕ್ಷಣವನ್ನು ವಾಣಿಜ್ಯೀಕರಣಗೊಳಿಸಿ ಪೋಷಕರಿಂದ ಹೆಚ್ಚು ಶುಲ್ಕ ವಸೂಲಿಮಾಡಿ, ದಂದೆ ನಡೆಸುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದರ ಜೊತೆಗೆ, ಶುಲ್ಕ ದಂದೆಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.

ಕೇಜ್ರೀವಾಲ್‌ ಬಂಧನ ಸಂವಿಧಾನ ವಿರೋಧಿ :  ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಜಾಮೀನು ಸಿಕ್ಕಿದ್ದು ಅತ್ಯಂತ ಸಂತಸದ ವಿಚಾರ. ಆದರೆ ಭ್ರಷ್ಟಚಾರ ನಡೆದಿರುವ ಬಗ್ಗೆ ಸೂಕ್ತ ದಾಖಲೆಗಳು ಇಲ್ಲದಿದ್ದರೂ ಕೇಜ್ರಿವಾಲ್ ಅವರನ್ನು ಬಂಧಿಸಿದ್ದು ನಿಜಕ್ಕೂ ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿತ್ತು ಎಂದು ವಿಷಾದ ವ್ಯಕ್ತಪಡಿಸಿದರು.

ಪೆನ್‌ ಡ್ರೈವ್ ಪ್ರಕರಣ ರಾಜ್ಯ ತಲೆ ತಗ್ಗಿಸುವ :  ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ ಪ್ರಕರಣದಿಂದ ಇಡೀ ಕರ್ನಾಟಕವೇ ತಲೆ ತಗ್ಗಿಸುವ ಪರಿಸ್ಥಿತಿ ಬಂದಿದೆ. ತಪ್ಪಿತಸ್ಥರ ವಿರುದ್ಧ ಚರ್ಚೆ ಮಾಡಬೇಕಾದ ಸಂದರ್ಭದಲ್ಲಿ, ವಿಡೀಯೋಗಳನ್ನು ಪ್ರಸಾರ ಮಾಡಿದವರು ಯಾರು ಎಂಬ ವಿಚಾರದ ಬಗ್ಗೆ ಚರ್ಚೆ ನಡೆಯುತ್ತಿರುವುದು ನಾಡಿನ ಘೋರ ದುರಂತ ಎಂದರು.

ಆಮ್‌ಆದ್ಮಿ ಪಕ್ಷದ ಜಿಲ್ಲಾ ಅಧ್ಯಕ್ಷ ಎಲ್. ರಂಗಯ್ಯ, ವಿಶ್ವನಾಥ ಕುಲಕರ್ಣಿ, ಪಕ್ಷದ ಮುಖಂಡರಾದ ಉಷಾ ಸಂಪತ್ ಕುಮಾರ್, ಐಶ್ವರ್ಯ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.