ಮೈಸೂರು : ಚಾಮುಂಡಿ ಬೆಟ್ಟ ಉಳಿಸಿ ಎಂಬ ಆಶಯದಲ್ಲಿ ಹಲವು ಸಂಘಟನೆಗಳು ಹಾಗೂ ನಾಗರಿಕರು ಸೇರಿ ‘ಚಾಮುಂಡಿಬೆಟ್ಟ ಸಂರಕ್ಷಣೆಗಾಗಿ ನಡಿಗೆ’ ಅಭಿಯಾನ ಹಮ್ಮಿಕೊಂಡಿದ್ದರು. ಚಾಮುಂಡಿಬೆಟ್ಟದ ಪಾದದಿಂದ ಬೆಟ್ಟದ ಮೆಟ್ಟಿಲು ಹತ್ತುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಚಾಮುಂಡಿಬೆಟ್ಟ ಸಂರಕ್ಷಣೆಗಾಗಿ ನಡಿಗೆ ಅಭಿಯಾನವು ಬೆಳಿಗ್ಗೆ 7.30ಕ್ಕೆ ಆರಂಭಗೊಂಡಿತು. ಅಭಿಯಾನಕ್ಕೆ ಕಪ್ಪತ್ತಗುಡ್ಡ ನಂದಿವೇರಿ ಮಠದ ಶಿವಕುಮಾರ ಸ್ವಾಮೀಜಿ ಹಾಗೂ ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಚಾಲನೆ ನೀಡಿದರು.
ನಡಿಗೆಯಲ್ಲಿ ಹಲವು ಪರಿಸರವಾದಿಗಳು, ಸಂಘಟನೆಗಳವರು, ನಾಗರಿಕರು ಹಾಗೂ ವಿದ್ಯಾರ್ಥಿಗಳು ಸೇರಿ 1000ಕ್ಕೂ ಹೆಚ್ಚು ಜನ ಭಾಗಿಯಾಗಿ ಹೆಜ್ಜೆ ಹಾಕಿದರು. ‘ಅಭಿವೃದ್ಧಿ ಯೋಜನೆ ಮತ್ತು ಮಾನವ ಹಸ್ತಕ್ಷೇಪದಿಂದ ಬೆಟ್ಟವು ನಲುಗಿದೆ. ಪ್ಲಾಸ್ಟಿಕ್ ತ್ಯಾಜ್ಯದ ಕೊಂಪೆಯಾಗಿದೆ. ಬಹುಮಹಡಿ ಕಟ್ಟಡಗಳು, ಮನೆಗಳ ನಿರ್ಮಾಣಕ್ಕೆ ಕಡಿವಾಣ ಹಾಕಿ, ಒತ್ತುವರಿ ನಿಲ್ಲಿಸಿ’ ಎಂಬ ಘೋಷಣೆಗಳನ್ನು ಮೊಳಗಿಸುತ್ತಾ ಫಲಕಗಳನ್ನು ಹಿಡಿದು ಮೆಟ್ಟಿಲು ಏರಿ, ಜಾಗೃತಿ ಮೂಡಿಸಿದರು.
ಬಳಿಕ ಚಾಮುಂಡಿ ಬೆಟ್ಟದಲ್ಲಿರುವ ಟಿ.ಎಸ್. ಸುಬ್ಬಣ್ಣ ಸಾರ್ವಜನಿಕ ಬಾಲಿಕ ಪ್ರೌಢಶಾಲೆಯ ಆವರಣದಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಕಪ್ಪತ್ತಗುಡ್ಡ ನಂದಿವೇರಿ ಮಠದ ಶಿವಕುಮಾರ ಸ್ವಾಮೀಜಿ ಮಾತನಾಡಿ, ನಾಡಿನ ಎಲ್ಲ ಬೆಟ್ಟ-ಗುಡ್ಡಗಳನ್ನು ಉಳಿಸಿ ಕಾಪಾಡುವ ಜವಾಬ್ದಾರಿ 7 ಕೋಟಿ ಕನ್ನಡಿಗರದ್ದು. ನಿರ್ಮಲವಾದ ಪರಿಸರ ನಿರ್ಮಾಣದ ಜಾಗದಲ್ಲಿ ದೇವರಿರಲೂ ಸಾಧ್ಯ. ಗದುಗಿನ ಜನರು ಸಂಘಟಿತರಾಗಿ ಕಪ್ಪತ್ತಗುಡ್ಡದಲ್ಲಿ ಗಣಿಗಾರಿಕೆ ಬರದಂತೆ ನೋಡಿಕೊಂಡರು ಎಂದು ಹೇಳಿದರು.
ಮೈಸೂರಿನ ಪ್ರಜ್ಞಾವಂತರು ಅಭಿವೃದ್ಧಿ ಯೋಜನೆಗಳಿಂದ ನಲುಗಿರುವ ಚಾಮುಂಡಿ ಬೆಟ್ಟ ಉಳಿಸಿಕೊಳ್ಳಬೇಕು ಎಂದರು. ನಾವೆಲ್ಲರೂ ಸಾಲು ಮರದ ತಿಮ್ಮಕ್ಕನನ್ನು ಆದರ್ಶವಾಗಿಟ್ಟುಕೊಂಡು ನಾಡು, ಪ್ರಕೃತಿ ಸೇವೆಗೆ ಸ್ವಯಂ ಪ್ರಜ್ಞೆ, ಸ್ವಯಂ ಪ್ರೇರಣೆ ಬೆಳೆಸಿಕೊಳ್ಳಬೇಕಿರುವುದು ಅತ್ಯವಶ್ಯಕ ಎಂದರು.
ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಮಾತನಾಡಿ, ಚಾಮುಂಡಿ ಬೆಟ್ಟದ ರಕ್ಷಣೆ ಅತ್ಯವಶ್ಯಕ. ಇದು ಅತ್ಯಂತ ಪರಿಸರ ಸೂಕ್ಷ್ಮಪ್ರದೇಶ. ನಿಸರ್ಗದತ್ತವಾಗಿ ಚಾಮುಂಡಿ ಬೆಟ್ಟ ಸೃಷ್ಟಿಯಾಗಿದೆ. ಬೆಟ್ಟದ ಸುತ್ತಲು ಕಲುಷಿತ ಹಾಗೂ ಪ್ಲಾಸ್ಟಿಕ್ ರಾಶಿ ಹೆಚ್ಚುತ್ತಿದೆ. ನಾವು ಅಭಿವೃದ್ಧಿಯ ವಿರೋಽಗಳಲ್ಲ. ಆದರೆ ಪ್ರಗತಿಯ ಹೆಸರಿನಲ್ಲಿ ಪ್ರಕೃತಿ ನಾಶ ಮಾಡಬಾರದು ಎಂದು ಎಚ್ಚರಿಸಿದರು.
ಅಭಿವೃದ್ಧಿ ಹೆಸರಿನಲ್ಲಿ ಇವತ್ತು ಹಲವು ಲೂಟಿಗಳು ಹೆಚ್ಚುತ್ತಿವೆ. ನಮ್ಮವರೆ ನಮ್ಮನ್ನು ದೋಚುತ್ತಿದ್ದಾರೆ. ಮುಂದಿನ ಪೀಳಿಗೆಗೆ ಪ್ರಕೃತಿ ಉಳಿಸುವ ಜವಾಬ್ದಾರಿ ನಮ್ಮದಾಗಬೇಕಿದೆ. ವಿದ್ಯಾವಂತರು, ಪ್ರಜ್ಞಾವಂತರೇ ಪ್ರಕೃತಿಗೆ ಮಾರಕವಾಗಿದ್ದಾರೆ ಎಂದು ಬೇಸರ ಹೊರಹಾಕಿದರು.
ಚಾಮುಂಡಿ ಬೆಟ್ಟ ಪ್ಲಾಸ್ಟಿಕ್ ಮುಕ್ತ ಪ್ರದೇಶವಾಗಲು, ತಿರುಪತಿ, ತಿರುವಣ್ಣಾಮಲೈನಲ್ಲಿ ಇರುವಂತೆಯೇ ಯಾರೂ ಪ್ಲಾಸ್ಟಿಕ್ ಕವರ್‌ಗಳನ್ನು ತೆಗೆದುಕೊಂಡು ಹೋಗದಂತೆ ಬೆಟ್ಟದ ಪಾದದಲ್ಲಿಯೇ ಪರಿಶೀಲನೆ ನಡೆಸಬೇಕು. ಅದರಿಂದ ತ್ಯಾಜ್ಯದ ಕೊಂಪೆ ಆಗಿರುವ ಬೆಟ್ಟದ ರಕ್ಷಣೆ ಸಾಧ್ಯವಾಗುತ್ತದೆ ಎಂದರು.
ಕೆಸವತ್ತೂರು ಮಠದ ಬಸವರಾಜೇಂದ್ರ ಸ್ವಾಮೀಜಿ, ತೊರೆನೂರು ಮಠದ ಮಲ್ಲೇಶ ಸ್ವಾಮೀಜಿ, ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಬಿಜೆಪಿ ಹಿಂದುಳಿವರ್ಗಗಳ ಮೋರ್ಚಾ ಅಧ್ಯಕ್ಷ ರಘು ಕೌಟಿಲ್ಯ, ಗೋಪಾಲಗೌಡ ಆಸ್ಪತ್ರೆ ಮುಖ್ಯಸ್ಥ ಶುಶ್ರೂತ್‌ಗೌಡ, ಪರಿಸರ ಬಳಗದ ಪರಶುರಾಮೇಗೌಡ, ಲೀಲಾ ಶಿವಕುಮಾರ್, ಒಡನಾಡಿಯ ಸ್ಟ್ಯಾನ್ಲಿ, ಪಿಯುಸಿಎಲ್‌ನ ಕಮಲ್ ಗೋಪಿನಾಥ್, ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ಮೇಜರ್ ಜನರಲ್ ಒಂಬತ್ಕೆರೆ, ಪ್ರೊ.ಕಾಳಚನ್ನೇಗೌಡ, ಡಾ.ಎನ್.ಎಸ್.ರಂಗರಾಜು, ಭೈರಪ್ಪ, ಲೀಲಾ ವೆಂಕಟೇಶ್, ಕುಮುದಿನಿ ಅಚ್ಚಿ, ಗೋಕುಲ್ ಗೋವರ್ಧನ್, ಅರುಣ್, ಶೈಲಜೇಶ್, ಪ್ರಭಾ, ಭಾಗ್ಯಶಂಕರ್, ಗೀತಾ, ಶ್ವೇತಾ, ಅಭಿಷೇಕ್, ಸುರೇಶ್ ಸುಬ್ಬರಾವ್, ರವಿ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.





