ಹುಣಸೂರು : ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ತುರ್ತು ಪರಿಸ್ಥಿತಿ ಜಾರಿಗೊಳಿಸಿ ದೇಶವನ್ನು ಕರಾಳ ದಿನಗಳಿಗೆ ದೂಡಿದ ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷದ ನಾಯಕರು ಇಂದು ಸ್ವಾರ್ಥಕ್ಕೆ ಸಂವಿಧಾನ ಪುಸ್ತಕ ಹಿಡಿದು ದೇಶ ಪರ್ಯಟನೆ ನಡೆಸುತ್ತಿರುವುದು ದುರಂತದ ಸಂಗತಿ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.
ನಗರದಲ್ಲಿ ಬಿಜೆಪಿ ಜಿಲ್ಲಾ ಗ್ರಾಮಾಂತರ ವಿಭಾಗ ಆಯೋಜಿಸಿದ್ದ ‘ತುರ್ತು ಪರಿಸ್ಥಿತಿ ಹೇರಿದ ಕಾಂಗ್ರೆಸ್ ಕರಾಳ ಇತಿಹಾಸಕ್ಕೆ 50 ವರ್ಷ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ತನ್ನ ರಾಜಕೀಯ ಆಟಕ್ಕೆ ಬಳಸಿಕೊಂಡು ಸಂವಿಧಾನವನ್ನು ತನ್ನ ಚೌಕಟ್ಟಿಗೆ ತಕ್ಕಂತೆ ತಿದ್ದುಪಡಿ ಮಾಡಿ ತುರ್ತು ಪರಿಸ್ಥಿತಿಯ ಲಾಭ ಪಡೆದಿತ್ತು. ಸಾರ್ವಭೌಮತ್ವ ಸಿದ್ಧಾಂತಕ್ಕೆ ಬೆಂಕಿ ಹಚ್ಚಿ ಸಂವಿಧಾನದ ತತ್ವ, ಸಿದ್ಧಾಂತಗಳನ್ನು ಮೂಲೆಗುಂಪು ಮಾಡಿತ್ತು ಎಂದು ದೂರಿದರು.
ತುರ್ತು ಪರಿಸ್ಥಿತಿ ವೇಳೆ ಹಲವು ಕಾಯ್ದೆಗಳಿಗೆ ತಿದ್ದುಪಡಿ ತಂದರು. ಸಂವಿಧಾತ್ಮಕವಾಗಿ ಅಂಬೇಡ್ಕರ್ ನೀಡಿದ ಮೂಲಭೂತ ಹಕ್ಕುಗಳನ್ನು ಕಸಿದುಕೊಂಡು ಏಕಚಕ್ರಾಧಿಪತ್ಯ ಆಡಳಿತ ನಡೆಸಿದರು. ಆದರೆ ಅವರ ಪಕ್ಷದವರು ಇಂದು ಸಂವಿಧಾನ ಪೀಠಿಕೆ ಓದಿ ಪ್ರಮಾಣ ಸ್ವೀಕರಿಸಿ ಸಂವಿಧಾನದ ಪಾವಿತ್ರ್ಯತೆಗೆ ಧಕ್ಕೆ ತರುತ್ತಿದ್ದಾರೆ ಎಂದು ಕಿಡಿಕಾರಿದರು.
ಮಾಜಿ ಸಚಿವ ಎನ್.ಮಹೇಶ್ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷ ಇದ್ದಲ್ಲಿ ಆಡಳಿತ ಪಕ್ಷಕ್ಕೆ ಗೌರವ. ಆದರೆ ಸಿದ್ದರಾಮಯ್ಯ ಸರ್ಕಾರದಲ್ಲಿ ಆಡಳಿತ ಪಕ್ಷದ ಶಾಸಕರಿಗೆ 50 ಕೋಟಿ ರೂ. ಅನುದಾನ ನೀಡಿದ್ದು, ವಿರೋಧ ಪಕ್ಷದವರಿಗೆ ಯಾವುದೇ ನೀಡದೆ ತಾರತಮ್ಯ ಎಸಗಿದ್ದಾರೆ. ಇದು ರಾಜ್ಯದಲ್ಲಿನ ಪ್ರಜಾಪ್ರಭುತ್ವದ ವ್ಯವಸ್ಥೆಯಾಗಿದೆ ಎಂದು ಟೀಕಿಸಿದರು.
ಮೈಸೂರಿನಲ್ಲಿ ಕಾಂಗ್ರೆಸ್ ಸರ್ಕಾರದ ಸಾಧನ ಸಮಾವೇಶ ನಡೆದಿದೆ. ಕಳೆದ 2 ವರ್ಷಗಳಲ್ಲಿ ಸಿದ್ದರಾಮಯ್ಯ ರಾಜ್ಯದ ಜನರಿಗೆ ನೀಡಿದ ಕೊಡುಗೆ ಏನು? ಎಂದು ಪ್ರಶ್ನಿಸಿದರು. ಸಂಸದ ಯದುವೀರ್ ಒಡೆಯರ್, ಮಾಜಿ ಶಾಸಕರಾದ ಬಿ.ಹರ್ಷವರ್ಧನ್, ಎಲ್.ನಾಗೇಂದ್ರ ಮಾತನಾಡಿದರು.
ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಕುಂಬ್ರಳ್ಳಿ ಸುಬ್ಬಣ್ಣ, ಬಸವರಾಜಪ್ಪ, ಮಹದೇವಯ್ಯ, ಮಂಗಳ ಸೋಮಶೇಖರ್, ಸೋಮಶೇಖರ್, ಗಣೇಶ್ ಕುಮಾರಸ್ವಾಮಿ, ಚಂದ್ರಶೇಖ, ಪ್ರಫುಲ್ಲ ಮಲ್ಲಾಡಿ ಇತರರು ಹಾಜರಿದ್ದರು.





