ಎಚ್.ಡಿ.ಕೋಟೆ : ತಾನು ಬೆಳೆದಿದ್ದ ಶುಂಠಿ, ಬಾಳೆ ಬೆಳೆಗೆ ಬೆಲೆ ದೊರೆಯದೆ ಕಂಗಾಲಾಗಿದ್ದ ರೈತರೊಬ್ಬರು ತಮ್ಮ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನಲ್ಲಿ ನಡೆದಿದೆ.
ತಾಲ್ಲೂಕಿನ ಜಿ.ಜಿ.ಕಾಲೋನಿ ಮತ್ತು ಭೋಗೇಶ್ವರ ಕಾಲೋನಿಯ ವ್ಯಾಪ್ತಿಯಲ್ಲಿರುವ ಅಣ್ಣಯ್ಯ ಅವರ ಜಮೀನಿನಲ್ಲಿ ಗುತ್ತಿಗೆಗೆ ಬೆಳೆ ಬೆಳೆಯುತ್ತಿದ್ದ ಕೇರಳದ ರೈತ ಮುಕುಂದ (೪೨) ಆತ್ಮಹತ್ಯೆ ಮಾಡಿಕೊಂಡವರು.
ಕೇರಳದ ನಿವಾಸಿಯಾದ ರೈತ ಮುಕುಂದ ಹತ್ತು ವರ್ಷಗಳಿಂದ ಒಬ್ಬರೇ ಈ ಭಾಗದಲ್ಲಿ ಜಮೀನುಗಳನ್ನು ಗುತ್ತಿಗೆಗೆ ಪಡೆದು ಬೆಳೆ ಬೆಳೆಯುತ್ತಿದ್ದರು. ಆದರೆ ಈ ಬಾರಿ ೧೦ ಎಕರೆ ಜಮೀನಿನಲ್ಲಿ ಬೆಳೆದಿದ್ದ ಶುಂಠಿ, ಬಾಳೆ, ಮುಸುಕಿನ ಜೋಳ, ಇನ್ನಿತರ ಬೆಳೆಗಳು ರೋಗಬಾಧೆಯಿಂದ ಮತ್ತು ಸೂಕ್ತ ಬೆಲೆ ದೊರೆಯದೆ ನಷ್ಟವಾಗಿ ಮಾಡಿದ ಸಾಲವನ್ನು ತೀರಿಸಲು ಸಾಧ್ಯವಾಗದೆ ಜೀವನದಲ್ಲಿ ಜುಗುಪ್ಸೆಗೊಂಡು ಶನಿವಾರ ಮಧ್ಯಾಹ್ನ ಜಮೀನಿನಲ್ಲಿದ್ದ ಶೆಡ್ಡಿನಲ್ಲಿ ಪಾನಮತ್ತನಾಗಿ ಚಾಕುವಿನಿಂದ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಅಕ್ಕದ ಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದವರು ಈ ಭಾಗದ ಮುಖಂಡರಾದ ಬಾಬು ಜಗಜೀವನ್ ರಾಂ ವಿಚಾರ ವೇದಿಕೆಯ ಮಾಜಿ ಅಧ್ಯಕ್ಷ ಪಿ.ನಾಗರಾಜು ಅವರಿಗೆ ಮತ್ತು ಪೊಲೀಸರಿಗೆ ವಿಷಯ ತಿಳಿಸಿ, ವಿಡಿಯೋ ಮಾಡಿಕೊಂಡು ಮುಕುಂದ ಅವರನ್ನು ಕೋಟೆ ಆಸ್ಪತ್ರೆಗೆ ಕರೆದೊಯ್ದರು. ಆದರೆ ಅಷ್ಟರಲ್ಲಿ ಸಾವನ್ನಪ್ಪಿದ್ದರು. ಈ ಸಂಬಂಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.





