ನಂಜನಗೂಡು: ಹುಲಿ, ಚಿರತೆಗಳ ಕಾಟದ ನಡುವೆ ಈಗ ನಂಜನಗೂಡು ತಾಲ್ಲೂಕಿನ ಹುಸ್ಕೂರು ಕೆರೆಯಲ್ಲಿ ಮೊಸಳೆ ಕಾಣಿಸಿಕೊಂಡು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಗ್ರಾಮದ ಕೂಗಳತೆ ದೂರದಲ್ಲಿರುವ ಕೆರೆಯಲ್ಲಿ ಕಳೆದ ಮೂರು ದಿನಗಳಿಂದ ಕೆರೆ ಆವರಣದೊಳಗೆ ಮೊಸಳೆ ತಿರುಗಾಡುತ್ತಿರುವುದನ್ನು ರೈತರು ಗಮನಿಸಿದ್ದಾರೆ. ಮೊಸಳೆ ಮಲಗಿರುವುದು ಹಾಗೂ ನೀರಿನೊಳಗೆ ಮೊಸಳೆ ಮುಳುಗಿರುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ಇದನ್ನು ಓದಿ: ನಾಗರಹೊಳೆ ಅರಣ್ಯಕ್ಕೆ ಕಂಟಕವಾಗಿರುವ ಸೆನ್ನಾ ಸಸ್ಯಪ್ರಭೇದ
ಮೂರು ದಿನಗಳಿಂದಲೂ ಪ್ರತ್ಯಕ್ಷವಾಗಿ ಗಮನಿಸಿದ ನಂತರ ಮೊಸಳೆ ಎಂಬುದು ದೃಢಪಟ್ಟಿದೆ. ತಕ್ಷಣವೇ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿ ಧನಂಜಯ್ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಕೆರೆಯಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.
ಹುಸ್ಕೂರು ಗ್ರಾಮದ ಕೆರೆಯಲ್ಲಿ ಕಳೆದ ಎರಡು ಮೂರು ದಿನಗಳಿಂದ ಮೊಸಳೆ ಕಾಣಿಸಿಕೊಂಡಿರುವ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ತಿಳಿಸಲಾಗಿತ್ತು. ಆದರೆ ಇಲಾಖೆಯವರು ಸ್ಪಂದಿಸುವುದಿಲ್ಲ. ಇದರಿಂದ ಗ್ರಾಮಸ್ಥರು ಮತ್ತು ರೈತರು ಕೆರೆಯ ಬಳಿ ಮತ್ತು ಜಮೀನಿಗೆ ತೆರಳಲು ಭಯ ಪಡುತ್ತಿದ್ದಾರೆ. ಜೊತೆಗೆ ಸುತ್ತಮುತ್ತಲಿನ ಪ್ರದೇಶದಲ್ಲಿ ಹುಲಿ ಮತ್ತು ಚಿರತೆಗಳು ಕಾಣಿಸಿಕೊಳ್ಳುತ್ತಿದ್ದು, ಗ್ರಾಮಸ್ಥರು ವಿಷಯ ಮುಟ್ಟಿಸಿದ ತಕ್ಷಣವೇ ಸ್ಥಳಕ್ಕೆ ಬಂದು ಕ್ರಮ ಕೈಗೊಳ್ಳಬೇಕು ಎಂದು ಭಾರತೀಯ ಕಿಸಾನ್ ಸಂಘದ ತಾಲ್ಲೂಕು ಅಧ್ಯಕ್ಷ ಹುಸ್ಕೂರ್ ಗಿರೀಶ್ ಆಗ್ರಹಿಸಿದರು.





