ಮೈಸೂರು: ಜಿಲ್ಲೆಯಲ್ಲಿ ಹುಲಿ ದಾಳಿ ಪ್ರಕರಣಗಳು ಮುಂದುವರಿದಿದ್ದು, ಗ್ರಾಮಸ್ಥರಲ್ಲಿ ಭಾರೀ ಆತಂಕ ಮೂಡಿಸಿದೆ. ಹುಣಸೂರು ತಾಲ್ಲೂಕಿನ ಗುರುಪುರ ಕೆರೆ ಬಳಿ ಹುಲಿ ದಾಳಿಗೆ ಒಂದು ಎತ್ತು ಬಲಿಯಾಗಿದೆ.
ಗುರುಪುರ ಗ್ರಾಮದ ಹಳೇವಾರಂಚಿಯ ಮುನ್ನಾ ಎಂಬುವರಿಗೆ ಸೇರಿದ ಎತ್ತನ್ನು, ಕೆರೆ ಸಮೀಪ ಜಾನುವಾರುಗಳನ್ನು ಮೇಯಲು ಕಟ್ಟಿ ಹಾಕಿದ್ದ ವೇಳೆ ಹುಲಿ ದಾಳಿ ಮಾಡಿ ಕೊಂದಿದೆ. ಒಂದೇ ತಾಲ್ಲೂಕಿನಲ್ಲಿ ನಿರಂತರವಾಗಿ ಹುಲಿ ದಾಳಿ ನಡೆಯುತ್ತಿರುವುದರಿಂದ ಗ್ರಾಮಸ್ಥರು ತೀವ್ರ ಭಯದಲ್ಲಿದ್ದಾರೆ.
ಇದೇ ಹುಣಸೂರು ತಾಲ್ಲೂಕಿನಲ್ಲಿ ಎರಡು ಕಡೆ ಹುಲಿ ದಾಳಿ ಸಂಭವಿಸಿದ್ದು, ಹಸು ಹಾಗೂ ಎತ್ತು ಬಲಿಯಾಗಿವೆ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಅರಣ್ಯ ಇಲಾಖೆಯ ವಿರುದ್ಧ ಪ್ರತಿಭಟನೆಗೆ ಇಳಿದಿದ್ದಾರೆ.
ಹುಲಿ ದಾಳಿಯಲ್ಲಿ ಮೃತಪಟ್ಟ ಎತ್ತಿನ ಶವವನ್ನು ಟ್ರ್ಯಾಕ್ಟರ್‌ನಲ್ಲಿ ತಂದು ಗ್ರಾಮಸ್ಥರು ಗುರುಪುರದಲ್ಲಿ ಪ್ರತಿಭಟನೆ ನಡೆಸಿದರು. ಈ ವೇಳೆ ಎಚ್.ಡಿ.ಕೋಟೆ–ಹುಣಸೂರು ಮುಖ್ಯರಸ್ತೆಯನ್ನು ತಡೆದು ಕೆಲಕಾಲ ರಸ್ತೆ ತಡೆ ನಡೆಸಿದರು.
ಅರಣ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದ ಗ್ರಾಮಸ್ಥರು, ತಕ್ಷಣ ಹುಲಿಯನ್ನು ಸೆರೆ ಹಿಡಿಯಬೇಕು. ಗ್ರಾಮಗಳ ಸುತ್ತಲೂ ಪಹರೆ ಹೆಚ್ಚಿಸಬೇಕು ಹಾಗೂ ಜಾನುವಾರು ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಹುಲಿ ದಾಳಿ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರ ಸುರಕ್ಷತೆ ಬಗ್ಗೆ ಗಂಭೀರ ಆತಂಕ ವ್ಯಕ್ತವಾಗಿದ್ದು, ಅರಣ್ಯ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.





