ಕಾಂಗ್ರೆಸ್‌ ಗ್ಯಾರೆಂಟಿ ಯೋಜನೆಗಳು ಮುಂದುವರೆಯಬೇಕು: ಸಂಸದ ಯದುವೀರ್‌ ಒಡೆಯರ್‌

ಮೈಸೂರು: ಕಾಂಗ್ರೆಸ್‌ ಗ್ಯಾರೆಂಟಿ ಯೋಜನೆಗಳಿಂದ ಜನರಿಗೆ ಹಲವಾರು ಅನುಕೂಲಗಳಾಗಿದ್ದು, ಕಾಂಗ್ರೆಸ್‌ನ ಗ್ಯಾರೆಂಟಿ ಯೋಜನೆಗಳು ಮುಂದುವರೆಯಬೇಕು ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅಭಪ್ರಾಯಪಟ್ಟರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಪಕ್ಷದವರು ಚುನಾವಣೆ ಎದುರಿಸಿ ಅಧಿಕಾರಕ್ಕೆ ಬಂದಿರುವುದೇ ಗ್ಯಾರೆಂಟಿ ಆಧಾರದ ಮೇಲೆ. ಅವುಗಳು ಮುಂದುವರೆಯಬೇಕು. ಆದರೆ ಈ ವಿಷಯದಲ್ಲಿ ತೀರ್ಮಾ ಕೈಗೊಳ್ಳುವುದು ಅವರ ಪಕ್ಷದವರಿಗೆ ಸೇರಿದ್ದಾಗಿದೆ ಎಂದು ಯದುವೀರ್‌ ಹೇಳಿದರು.

ಮೈಸೂರಿನಲ್ಲಿ ಪಾರಂಪರಿಕ ಕಟ್ಟಡಗಳ ನೆಲಸಮಗೊಳಿಸುವ ಸಂಬಂಧ ಮೈಸೂರಿನಲ್ಲಿರುವ ದೇವರಾಜ ಮರುಕಟ್ಟೆ, ಲ್ಯಾಲ್ಸ್‌ ಡೌನ್‌ ಕಟ್ಟಡಗಳ ನೆಲಸಮಗೊಳಿಸುವ ಅವಶ್ಯಕತೆಯಿಲ್ಲ. ಚಾಮುಂಡಿ ಬೆಟ್ಟ ಸೇರಿದಂತೆ ಎಲ್ಲವನ್ನು ಸಂರಕ್ಷಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ಮೈಸೂರು-ಕೊಡಗು ಕ್ಷೇತ್ರ ಬಹಳ ವಿಶಾಲ ವ್ಯಾಪ್ತಿ ಹೊಂದಿದ್ದು, ತಳಮಟ್ಟದ ಸಮಸ್ಯೆ ತಿಳಿದು ಸ್ಪಂದಿಸಲು ಸಮಯ ಬೇಕಾಗುತ್ತದೆ. ನನ್ನದೇ ಆದ ಕೆಲವು ಯೋಜನೆಗಳಿದ್ದು, ಈ ಎರಡೂ ಕ್ಷೇತ್ರಗಳಲ್ಲಿಯೂ ಕೃಷಿ, ಪರಂಪರೆ ಹಾಗೂ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.

ಈ ಕ್ಷೇತ್ರದಲ್ಲಿ ಭ್ರಷ್ಟಾಚಾರ ರಹಿತ ಹಾಗೂ ಪಾರದರ್ಶಕ ಆಡಳಿತ ಕೊಡಲು ಮೈಸೂರು ಅರಸರ ಸಿದ್ದಾಂತ, ಎನ್‌ಡಿಎ ಸಿದ್ದಾಂತ ಆಧಾರದ ಮೇಲೆ ಕೆಲಸ ಮಾಡಲಾಗುವುದು. ಬಹಳ ಜನರು ನನ್ನ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡು ಮತ ನೀಡಿದ್ದಾರೆ. ಅವರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲು ಶ್ರಮ ವಹಿಸುವುದಾಗಿ ಯದುವೀರ್‌ ಹೇಳಿದರು.