ಮೈಸೂರು : ನಿವೃತ್ತ ಪೊಲೀಸ್ ಮಹಾನಿರ್ದೇಶಕ ಡಾ.ಡಿ.ವಿ.ಗುರುಪ್ರಸಾದ್ ರಚಿತ ‘ಕೊಕೇನ್ ರಾಜ ರಹಸ್ಯ’, ‘ಕ್ರೈಂ ಡೈರಿ’ (4 ಭಾಗಗಳು) ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.
ನಗರದ ಪೊಲೀಸ್ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಕೃತಿಗಳನ್ನು ಬಿಡುಗಡೆ ಮಾಡಿದರು.
ಬಳಿಕ ಮಾತನಾಡಿದ ಅವರು, ನಾವು ಓದಿದ ವಿಚಾರವನ್ನೆ ಬರೆಯಲು ಸಾಕಷ್ಟು ಕಷ್ಟಪಡುತ್ತೇವೆ. ಆದರೆ, ಪೊಲೀಸ್ ವೃತ್ತಿಯ ಜೊತೆಗೆ ಹಿರಿಯರಾದ ಗುರುಪ್ರಸಾದ್ ಅವರು, ನೂರಕ್ಕೂ ಹೆಚ್ಚು ಪುಸ್ತಕ ಬರೆದಿರುವುದು ನಮ್ಮೆಲ್ಲರಿಗೂ ಮಾದರಿ ಎಂದರು.
ಸದಾ ಒತ್ತಡದಲ್ಲಿರುವ ತಮ್ಮ ಮನಸ್ಸಿನ ಒತ್ತಡ ನಿವಾರಣೆ ಜೊತೆಗೆ ಕೆಲಸಕ್ಕೆ ಪ್ರೇರಣೆ ಪಡೆಯಲಿದ್ದಾರೆ. ಹಾಗೆಯೇ ನಮ್ಮ ಮಕ್ಕಳಿಗೆ ಓದಿನ ಅರಿವು ಮೂಡಿಸಬೇಕಾದರೆ, ಅವರಿಗೆ ದಿನಕ್ಕೆ ಒಂದು ಪದವನ್ನಾದರೂ ಕಲಿಸಬೇಕು. ನಾವು ಕೂಡ ಕಲಿಯಬೇಕು ಎಂದು ತಿಳಿಸಿದರು.
ಡಾ.ಡಿ.ವಿ.ಗುರುಪ್ರಸಾದ್ ಮಾತನಾಡಿ, ಕಳೆದ 45 ವರ್ಷದಿಂದ ಬರೆಯುತ್ತಿದ್ದೇನೆ. ಒಂದೊಂದು ಪುಸ್ತಕದಲ್ಲಿಯೂ ನಿಜವಾಗಿ ನಡೆದಿರುವ ಅಪರಾಧ ಕೃತ್ಯಗಳ ಮಾಹಿತಿ ಇದೆ. ಮೈಸೂರಿನಲ್ಲಿ ನಡೆದಿರುವ ಪ್ರಕರಣಗಳ ಬಗ್ಗೆಯೂ ಬರೆದಿದ್ದು, ರಾಜ್ಯದ ಸುಮಾರು 250 ಪ್ರಕರಣಗಳ ಕುರಿತು ಬರೆದಿದ್ದೇನೆ. ಯಾವ ಕಾರಣಕ್ಕೆ ಅಪರಾಧ ಕೃತ್ಯಗಳು ನಡೆದವು, ನಂತರ ಪೊಲೀಸರ ಕಾರ್ಯಾಚರಣೆ ಸೇರಿದಂತೆ ಪ್ರಮುಖ ಅಂಶಗಳನ್ನು ಕಥೆಯ ರೂಪದಲ್ಲಿ ಓದುಗರಿಗೆ ನೀಡಿದ್ದೇನೆ ಎಂದರು.
10 ವರ್ಷ ವೀರಪ್ಪನ್ ಬಗ್ಗೆ ಸಂಶೋಧನೆ ಮಾಡಿದ್ದೇನೆ. ವೀರಪ್ಪನ್ ಮಾಡಿದ್ದು, ಸುಮಾರು 125 ಕೊಲೆಗಳಾದರೆ, ಕೊಲಂಬಿಯಾ ದೇಶದ ಕುಖ್ಯಾತ ಕೊಲೆಗಾರ ಪಾಬ್ಲೊ ಎಸ್ಕೋಬಾರ್ ಸಾವಿರಾರು ಕೊಲೆಗಳನ್ನು ಮಾಡಿದ್ದಾನೆ. ಆತನ ಬಗ್ಗೆ ಕೊಕೇನ್ ರಾಜ ರಹಸ್ಯ ಪುಸ್ತಕ ಬರೆದಿದ್ದೇನೆ. ಇಡೀ ಕೊಲಂಬಿಯಾ ದೇಶದ ಸಾಲವನ್ನೇ ತೀರಿಸುವಷ್ಟು ಹಣ, ಆಸ್ತಿ ಸಂಪಾದಿಸಿದ್ದ ಆತ ಬದುಕಿದ್ದು, ಕೇವಲ 44 ವರ್ಷ ಅಪರಾಧ ಕೃತ್ಯಗಳಿಂದಾಗುವ ಪರಿಣಾಮಗಳನ್ನು ತಿಳಿಸುವ ಮೂಲಕ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದೇನೆ. ಈ ಪುಸ್ತಕಗಳು ಪೊಲೀಸ್ ಅಧಿಕಾರಿಗಳಿಗೆ ಮಾತ್ರವಲ್ಲದೆ ಸಾರ್ವಜನಿಕರೂ ಓದಬೇಕಿದೆ ಎಂದು ಹೇಳಿದರು.
ಡಿಸಿಪಿಗಳಾದ ಬಿಂದುಮಣಿ, ಸುಂದರ್ ರಾಜ್ ಹಾಜರಿದ್ದರು.





