ನಂಜನಗೂಡು: ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಡೈರಿ ಆವರಣದಲ್ಲೇ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ತರಗನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಘಟನೆ ವಿವರ: ಕಳೆದ 17 ವರ್ಷಗಳಿಂದ ಮಹೇಶ್ ಎಂಬುವವರು ಡೈರಿ ಕಾರ್ಯದರ್ಶಿಯಾಗಿದ್ದರು. ನಂತರ ಮಹೇಶ್‌ರನ್ನು ಅವ್ಯವಹಾರದ ಆರೋಪದ ಮೇಲೆ ಅಮಾನತು ಮಾಡಿ ಆ ಜಾಗಕ್ಕೆ ಮಹದೇವ ಪ್ರಸಾದ್ ಎಂಬುವವರನ್ನು ತಾತ್ಕಾಲಿಕ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿತ್ತು.
ಈ ಬೆಳವಣಿಗೆಗಳ ಮಧ್ಯೆ ಮಹೇಶ್ ಮೇಲೆ ಮಾಡಿರುವ ಆರೋಪ ನಿರಾಧಾರ ಎಂದು ಸಾಬೀತಾಗಿ, ಮತ್ತೆ ಕಾರ್ಯದರ್ಶಿಯಾಗಿ ಮಹೇಶ್‌ರನ್ನೇ ಮುಂದುವರಿಯಲು ಅಸಿಸ್ಟೆಂಟ್ ರಿಜಿಸ್ಟರ್ ಸಹಕಾರಿ ನ್ಯಾಯಾಲಯ ಆದೇಶ ಹೊರಡಿಸಿತ್ತು.
ಈ ಹಿನ್ನೆಲೆಯಲ್ಲಿ ಮಹದೇವಪ್ರಸಾದ್‌ನನ್ನು ಹುದ್ದೆಯಿಂದ ಕೈಬಿಡಲು ಸಂಘದ ಸದಸ್ಯರು ಮೇಲಾಧಿಕಾರಿಗೆ ಮನವಿ ಪತ್ರ ಕೊಡಲು ನಿರ್ಧರಿಸಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಮಹದೇವಪ್ರಸಾದ್ ಹಾಗೂ ಮಹೇಶ್ ಗುಂಪಿನ ನಡುವೆ ಮಾರಾಮಾರಿ ನಡೆದಿದ್ದು, ಒಬ್ಬರಿಗೊಬ್ಬರು ಬಡಿದಾಡಿಕೊಂಡಿದ್ದಾರೆ.
ಘಟನೆಯಲ್ಲಿ ಬಸವರಾಜಪ್ಪ ಹಾಗೂ ಅವರ ಮಗ ಸದಾನಂದ ಎಂಬುವವರು ಗಂಭೀರ ಗಾಯಗೊಂಡಿದ್ದು, ಅವರನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಸಂಬಂಧ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





