Mysore
25
scattered clouds

Social Media

ಮಂಗಳವಾರ, 24 ಮಾರ್ಚ್ 2026
Light
Dark

ನಾಡದೇವತೆ ಚಾಮುಂಡೇಶ್ವರಿ ವರ್ಧಂತಿ ಮಹೋತ್ಸವ: ಬೆಟ್ಟದಲ್ಲಿ ಚಿನ್ನದ ಪಲ್ಲಕ್ಕಿ ಉತ್ಸವ

chamundeshwari chamundi temple

ಮೈಸೂರು: ಇಂದು ನಾಡ ಅಧಿದೇವತೆ ಚಾಮುಂಡೇಶ್ವರಿ ದೇವಿಯ ವರ್ಧಂತಿಯ ಸಂಭ್ರಮ ಮನೆಮಾಡಿದ್ದು, ಬೆಟ್ಟದಲ್ಲಿ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು.

ಮೈಸೂರು ರಾಜವಂಶಸ್ಥರ ಕುಲದೇವತೆಯೂ ಆಗಿರುವ ಚಾಮುಂಡೇಶ್ವರಿ ವರ್ಧಂತಿ ಉತ್ಸವದ ಅಂಗವಾಗಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿವೆ.

ದೇವಸ್ಥಾನದಲ್ಲಿ ಇಂದು ಮುಂಜಾನೆಯಿಂದಲೇ ಪೂಜಾ ಕೈಂಕರ್ಯಗಳು ನೆರವೇರಿದ್ದು, ದೇವಿಯ ಮೂರ್ತಿಗೆ ಅಭ್ಯಂಜನ ಸ್ನಾನ ಮಾಡಿಸಿದ ಬಳಿಕ ಅಲಂಕಾರಗಳೊಂದಿಗೆ ವಿಶೇಷ ಪೂಜೆ ನೆರವೇರಿಸಲಾಗಿದೆ.

ವರ್ಧಂತಿ ಮಹೋತ್ಸವದ ಅಂಗವಾಗಿ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌, ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಹಾಗೂ ತ್ರಿಷಿಕಾ ಕುಮಾರಿ ಒಡೆಯರ್‌ ಅವರು ಚಾಮುಂಡಿ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ನಂತರ ಮಹಾಮಂಗಳಾರತಿ ಬಳಿಕ ಉತ್ಸವ ಮೂರ್ತಿಯನ್ನು ಬೆಳ್ಳಿ ಪಲ್ಲಕ್ಕಿಯಲ್ಲಿ ಇರಿಸಿ, ದೇವಸ್ಥಾನದ ಆವರಣದಲ್ಲಿ ಪ್ರದಕ್ಷಿಣೆ ಹಾಕಲಾಯಿತು. ಮತ್ತೆ ದೇವಸ್ಥಾನದ ಮುಂಭಾಗದಲ್ಲಿ ಚಿನ್ನದ ಪಲ್ಲಕ್ಕಿಯಲ್ಲಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ಮೆರವಣಿಗೆ ನಡೆಯಿತು.

ಅರಮನೆ ಪೊಲೀಸ್‌ ಬ್ಯಾಂಡ್‌ ಜೊತೆಗೆ ಮಂಗಳವಾದ್ಯ, ಛತ್ರಿ, ಚಾಮರಗಳೊಂದಿಗೆ ನಡೆದ ಮೆರವಣಿಗೆಯನ್ನು ಸಹಸ್ರಾರು ಭಕ್ತರು ಕಣ್ತುಂಬಿಕೊಂಡರು.

ವರ್ಧಂತಿಯ ಅಂಗವಾಗಿ ಇಂದು ಬೆಳಿಗ್ಗೆ 8 ಗಂಟೆಯಿಂದಲೇ ಕೆಎಸ್‌ಆರ್‌ಟಿಸಿ ಬಸ್‌ ಕಾರ್ಯಾಚರಣೆ ಆರಂಭವಾಗಿದೆ. ಬೆಟ್ಟಕ್ಕೆ ಮೆಟ್ಟಿಲುಗಳ ಮೂಲಕವೂ ಸಾವಿರಾರು ಭಕ್ತರು ತೆರಳುತ್ತಿದ್ದು, ದೇವಿಯ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ.

ಇನ್ನು ಬೆಟ್ಟದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿದ್ದು, ಪೊಲೀಸರು ಎಲ್ಲೆಡೆ ಹದ್ದಿನ ಕಣ್ಣಿಟ್ಟಿದ್ದಾರೆ.

Tags:
error: Content is protected !!