ಮೈಸೂರು: ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಇಲ್ಲಿಯವರೆಗೂ ಒಂದಲ್ಲಾ, ಮತ್ತೊಂದರಂತೆ ಎಲ್ಲಾ ವಸ್ತುಗಳ ಮೇಲೆ ಬೆಲೆ ಏರಿಕೆ ಮಾಡಿ ಗ್ಯಾರಂಟಿ ಯೋಜನೆಗೆ ಹಣ ಹೊಂದಿಸುತ್ತಿದೆ. ಅಂತೆಯೇ ಈಗ ಹಾಲಿನ ದರ ಏರಿಕೆ ಮಾಡಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಮೈಸೂರಿನಲ್ಲಿ ಇಂದು(ಮಾರ್ಚ್.28) ಹಾಲಿನ ದರ 4.ರೂ. ಹೆಚ್ಚಳ ಮಾಡಿರುವ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಸರ್ಕಾರ ಎಲ್ಲದಕ್ಕೂ ದರ ಏರಿಸುತ್ತಾ ಬಂದಿದೆ. ಮರಣ ಜನನ ಪ್ರಮಾಣ ಪತ್ರದಿಂದ ಹಿಡಿದು ಪಹಣಿ ಪತ್ರದ ತನಕ ಏರಿಕೆ ಮಾಡಿದ್ದಾರೆ. ಅದರಂತೆ ಇದೀಗ ಹಾಲಿನ ದರ ಏರಿಕೆ ಮಾಡಿದ್ದಾರೆ. ಅಲ್ಲದೇ ರೈತರಿಗೆ 4 ರೂಪಾಯಿ ಕೊಡುತ್ತೇವೆಂದು ಮಾಡಿದ್ದಾರೆ. ಮುಂದೆ ವಿದ್ಯುತ್ ದರವನ್ನು ಏರಿಕೆ ಮಾಡುತ್ತಾರೆ. ಹಾಗಾಗಿ ಈ ಬೆಲೆ ಏರಿಕೆ ಮೂಲಕ ಗ್ಯಾರೆಂಟಿ ಯೋಜನಗಳಿಗೆ ಹಣ ಹೊಂದಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಸರ್ಕಾರ, ಗ್ಯಾರಂಟಿ ಯೋಜನೆಗಳಿಗೆ ಒಂದು ತಿಂಗಳು ಹಣ ನೀಡಿದರೆ ಮತ್ತೆ 3 ತಿಂಗಳು ಕೊಡೋದಿಲ್ಲ. 5 ಗ್ಯಾರಂಟಿ ಹೆಸರನ್ನು ಹೇಳಿಕೊಂಡು 5 ವರ್ಷ ಮುಗಿಸೋಣವೆಂದು ಇದ್ದಾರೆ. ಮುಂದೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲ್ಲ. ಬಿಜೆಪಿ ಅಧಿಕಾರಕ್ಕೆ ಬರುತ್ತದೆಂದು ಅವರಿಗೂ ಗೊತ್ತಿದೆ. ಹೀಗಾಗಿ ಇರೋ ತನಕ ಕಾಲ ತಳ್ಳುವ ನೀತಿ ಅನುಸರಿಸುತ್ತಿದ್ದಾರೆ ಎಂದು ಹರಿಹಾಯ್ದರು.
ಸಿದ್ದರಾಮಯ್ಯ ಇಂತಹ ಕನಿಷ್ಠ ಸಿಎಂ ಆಗುತ್ತಾರೆಂದು ಅಂದುಕೊಂಡಿರಲಿಲ್ಲ
ದೇಶದಲ್ಲಿ 3 ಕಡೆ ಕಾಂಗ್ರೆಸ್ ಸರ್ಕಾರವಿದ್ದು, ಎಲ್ಲಾ ಕಡೆ ಲೂಟಿ ಮಾಡಿ ದೇಶದಲ್ಲಿ ಕಾಂಗ್ರೆಸ್ ಉಳಿಸುವ ಯೋಜನೆ ಮಾಡಿಕೊಂಡಿದ್ದಾರೆ. ಅಲ್ಲದೇ ಸುಫಾರಿ ಹನಿಟ್ರ್ಯಾಪ್ ಎಂಬುದು ಕಾಂಗ್ರೆಸ್ ಆಕ್ಟಿವೀಟಿಯಾಗಿದೆ. ತಮ್ಮ ವಿರುದ್ಧ ಮಾತನಾಡುವವರನ್ನು ಮುಗಿಸಬೇಕೆಂದು ಇಂತಹ ವಿಚಾರಗಳು ರಾಜ್ಯ ಸರ್ಕಾರದಲ್ಲಿ ನಡೆಯುತ್ತಿವೆ. ಇನ್ನು ಸಿಎಂ ಸಿದ್ದರಾಮಯ್ಯ ಹನಿಟ್ರ್ಯಾಪ್ ಅಂದರೆ ಏನೆಂದು ಜನಕ್ಕೆ ತಿಳಿಸಿ ಹೇಳಲಿ. ಕನ್ನಡಲ್ಲಿ ಇದರರ್ಥ ಕೇಳಿದರೆ ರಾಜ್ಯದ ಹೆಣ್ಣು ಮಕ್ಕಳು ಪೊರಕೆ ಹಿಡಿದುಕೊಂಡು ಬರುತ್ತಾರೆ ಎಂದು ಹೇಳಿದ್ದಾರೆ.