Mysore
25
overcast clouds
Light
Dark

ನೀರಿನ ಟ್ಯಾಂಕ್‌, ಬೋರ್‌ವೆಲ್‌ಗಳ ಸ್ವಚ್ಛತೆಗೆ ಸಿಇಒ ಸೂಚನೆ

ಮೈಸೂರು: ಕುಡಿಯುವ ನೀರಿನ ಟ್ಯಾಂಕ್‌, ಬೋರ್‌ವೆಲ್‌ಗಳ ಸ್ವಚ್ಛತೆ ಹಾಗೂ ಶುದ್ಧ ಕುಡಿಯುವ ನೀರನ್ನು ಕಾಲಕಾಲಕ್ಕೆ  ಪರೀಕ್ಷೆ ನಡೆಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಗಾಯಿತ್ರಿ ಅವರು ವರುಣ ಗ್ರಾಮ ಪಂಚಾಯಿತಿ ಅಧಿಕಾರಿಗೆ ಸೂಚಿಸಿದರು.

ಅವರು ಇಂದು (ಮೇ.೨೬) ಸಾಂಕ್ರಮಿಕ ರೋಗ ಹರಡದಂತೆ ಮುನ್ನೆಚ್ಚರಿಕಾ ಕ್ರಮ ವಹಿಸುವ ಬಗ್ಗೆ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿ, ಆರೋಗ್ಯ ಇಲಾಖೆ ಅಧಿಕಾರಿ, ತಾಲ್ಲೂಕು ಪಂಚಾಯಿತಿ ಅಧಿಕಾರಿ, ಗ್ರಾಮ ಪಂಚಾಯಿತಿ ಅಧಿಕಾರಿ ಹಾಗೂ ಸಿಬ್ಬಂದಿಯೊಂದಿಗೆ ಸಭೆ ನಡೆಸಿ ಮಾತನಾಡಿದರು.

ಮನೆಗಳಿಗೆ ನೀರು ಬಿಡುವ ಮುನ್ನ ನೀರಿನ ಶುದ್ಧತೆಯನ್ನು ಪರೀಕ್ಷಿಸಿ, ನೀರಿನ ಶುದ್ಧತೆ ಬಗ್ಗೆ ಈ ಮುಂಚೆ ತರಬೇತಿ ನೀಡಿದ್ದು, ಅದರಂತೆ ನೀರಿನ ಶುದ್ಧತೆ ಪರೀಕ್ಷಿಸಿ ಮನೆಗಳಿಗೆ ನೀರು ಬಿಡುವಂತೆ ಪಂಚಾಯತಿ ಅಧಿಕಾರಿಗಳಿಗೆ ಸೂಚಿಸಿದರು.

ಆಶಾ ಕಾರ್ಯಕರ್ತೆಯರು ಪ್ರತಿದಿನ ಮನೆ ಮನೆಗೆ ಭೇಟಿ ನೀಡಿ ಸಾಂಕ್ರಮಿಕ ರೋಗ ಹರಡದಂತೆ ಮುನ್ನೆಚ್ಚರಿಕಾ ಕ್ರಮದ ಬಗ್ಗೆ ಅರಿವು ಮೂಡಿಸಬೇಕು. ಕುಡಿಯುವ ನೀರನ್ನು ಕುದಿಸಿ ಆರಿಸಿ ಬಳಸುವಂತೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಸಣ್ಣ ಮಕ್ಕಳು, ಬಾಣಂತಿಯರು, ಗರ್ಭಿಣಿಯರು ಹಾಗೂ  ವಯಸ್ಸಾದವರಿಗೆ ಹೆಚ್ಚಿನ ಅರಿವು ಮೂಡಿಸಿ ಎಂದರು.

ಸಭೆಗೆ ಮುನ್ನ ವರುಣ ಗ್ರಾಮದ ಕುಡಿಯುವ ನೀರಿನ ಸ್ಥಾವರಗಳು ಹಾಗೂ ನೀರಿನ ಪೈಪ್‌ಗಳ ಸ್ವಚ್ಚತೆ ಬಗ್ಗೆ ಪರಿಶೀಲಿಸಿದರು. ವರುಣ ಗ್ರಾಮದ ಸುತ್ತೂರು ಮುಖ್ಯ ರಸ್ತೆಯ ಬಲಭಾಗದಲ್ಲಿರುವ ಕುಡಿಯುವ ನೀರಿನ ಸ್ಥಾವರಗಳ ಕೇಸಿಂಗ್ ಎತ್ತರಿಸಲು ತಿಳಿಸಿದರು.