ನಂಜನಗೂಡು : ಜಾತೀಯತೆ ಎಂಬುದು ಸಂಪೂರ್ಣವಾಗಿ ತೊಲಗಬೇಕು. ಎಲ್ಲ ಸಮುದಾಯದವರು ನಮ್ಮವರೇ ಎಂದು ತಿಳಿದಾಗ ಮಾತ್ರ ಜಾತೀಯತೆ ದೂರವಾಗಲು ಸಾಧ್ಯ ಎಂದು ವಿಧಾನಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
ನಂಜನಗೂಡು ನಗರದ ಶ್ರೀ ನಂಜುಂಡೇಶ್ವರ ಸ್ವಾಮಿ ದಾಸೋಹ ಭವನದ ಆವರಣದಲ್ಲಿ ಭಾನುವಾರ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ, ಹಾಗೂ ಜಿಲ್ಲಾಡಳಿತದ ವತಿಯಿಂದ ಶ್ರೀ ದಾಸ ಶ್ರೇಷ್ಠ ಕನಕದಾಸರ 538ನೇ ಜಯಂತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಳೆದ ಮೂರು ವರ್ಷಗಳಿಂದ ನಂಜನಗೂಡಿನಲ್ಲಿ ಕನಕ ಜಯಂತಿಯನ್ನು ಆಚರಣೆ ಮಾಡಿಲ್ಲ. ಈ ವರ್ಷ ಎಲ್ಲರೂ ಒಗ್ಗಟ್ಟಾಗಿ ಕನಕ ಜಯಂತಿಯನ್ನು ಆಚರಣೆ ಮಾಡುತ್ತಿದ್ದಾರೆ. ಪ್ರತಿವರ್ಷ ಒಗ್ಗಟಿನಿಂದ ಆಚರಣೆ ಮಾಡಬೇಕಾಗಿದೆ.
ಕನಕದಾಸರು ಕುರುಬ ಸಮುದಾಯದ ಪ್ರಮುಖ ದಾಸ ಶ್ರೇಷ್ಠರಾಗಿದ್ದಾರೆ. ತಳ ಸಮುದಾಯದ ವಿರುದ್ಧ ಅಂದಿನ ಕಾಲದಲ್ಲಿ ಧ್ವನಿ ಎತ್ತಿದರು. ಸಾಕಷ್ಟು ಹಣ ವೆಚ್ಚ ಮಾಡಿ ಜಯಂತಿ ಆಚರಣೆ ಮಾಡಿದರೆ ಮಾತ್ರ ಅದು ಯಶಸ್ವಿಯಾಗುವುದಿಲ್ಲ. ಬದಲಿಗೆ ವರ್ಷಪೂರ್ತಿ ಕನಕದಾಸರ ಬಗ್ಗೆ ತಿಳಿಸುವ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರಬೇಕು. ನಾವು ಕನಕದಾಸರು, ಬಸವಣ್ಣ, ಅಂಬೇಡ್ಕರ್ ಆಗಲು ಸಾಧ್ಯವಿಲ್ಲ. ಅಂಬೇಡ್ಕರ್ ರವರ ಸಂವಿಧಾನ ರಕ್ಷಣೆ ಮಾಡುವ ಕೆಲಸವನ್ನು ಎಲ್ಲರೂ ಮಾಡಬೇಕು. ಸಂವಿಧಾನ ರಚನೆಯಾದ ನಂತರ ಎಲ್ಲಾ ಜಾತಿ ಜನಾಂಗಗಳಿಗೂ ಸಮಾನವಾದ ಸೌಲಭ್ಯಗಳು ಸಿಗುತ್ತಿವೆ. ಅತ್ಯಂತ ಹಿಂದುಳಿದ ವರ್ಗದಲ್ಲಿ ಕುರುಬ ಸಮುದಾಯ ಮೂರನೇ ಸ್ಥಾನದಲ್ಲಿದೆ. ಸಂಘಟಿತರಾಗಿ ಹೋರಾಟ ಮಾಡಬೇಕಾಗಿದೆ. ಮುಖ್ಯವಾಗಿ ಎಲ್ಲ ಸಮುದಾಯಗಳು ಶಿಕ್ಷಣವನ್ನು ತಮ್ಮ ಮಕ್ಕಳಿಗೆ ಕೊಡಿಸಬೇಕು. ನಮ್ಮ ತಂದೆ ಎರಡನೇ ಬಾರಿ ಸಾಮಾಜಿಕ ನ್ಯಾಯ ಸಿದ್ಧಾಂತದ ಅಡಿಯಲ್ಲಿ ಮುಖ್ಯಮಂತ್ರಿ ಆಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಜಾತಿ ಸಮೀಕ್ಷೆ ಮಾಡಲು ಹೊರಟ ಸಂದರ್ಭದಲ್ಲಿ ಪಟ್ಟಭದ್ರಾ ಹಿತಾಶಕ್ತಿಗಳು ವಿರೋಧ ವ್ಯಕ್ತಪಡಿಸಿದ್ದರು. ಈಗಾಗಲೇ ಸಮೀಕ್ಷೆ ಮುಗಿದಿದ್ದು ಫಲಿತಾಂಶ ಕೆಲವೇ ದಿನಗಳಲ್ಲಿ ಹೊರಬರಲಿದೆ ಎಂದರು.
ಇದನ್ನು ಓದಿ: ರಂಗಾಯಣ | ಐದು ದಿನಗಳ ʼನಿರಂತರ ರಂಗ ಉತ್ಸವʼಕ್ಕೆ ತೆರೆ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಸಕ ದರ್ಶನ್ ಧ್ರುವನಾರಾಯಣ್ ಮಾತನಾಡಿ, ನಗರದಲ್ಲಿ ಬಹಳ ಅರ್ಥಪೂರ್ಣವಾಗಿ ಕನಕ ಜಯಂತಿ ಆಚರಣೆ ನಡೆಯುತ್ತಿದೆ. ವಿಶೇಷವಾಗಿ ಜಯಂತಿಯನ್ನು ಆಚರಣೆ ಮಾಡುವ ನಿಟ್ಟಿನಲ್ಲಿ ಚರ್ಚ ಸ್ಪರ್ಧೆ ಆಯೋಜನೆ ಮಾಡಲಾಗಿದೆ. ಜಯಂತಿ ಆಚರಣೆ ಸಂದರ್ಭದಲ್ಲಿ ಇಂತಹ ಕಾರ್ಯಕ್ರಮಗಳು ಎಲ್ಲಾ ಜಯಂತಿ ಸಂದರ್ಭದಲ್ಲಿ ನಡೆದುಕೊಂಡು ಬರುತ್ತಿವೆ. ನಾನು ರಾಜಕೀಯ ಪ್ರವೇಶ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಾ. ಯತೀಂದ್ರ ಸಿದ್ದರಾಮಯ್ಯ ಕಾರಣಕರ್ತರಾಗಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳ ಜೊತೆಗೆ ಅಭಿವೃದ್ಧಿ ಕಾರ್ಯವನ್ನು ಮಾಡಿಕೊಂಡು ಬರುತಿದೆ. ಐದು ಗ್ಯಾರಂಟಿ ಯೋಜನೆಗಳು ಹಿಂದುಳಿದ ವರ್ಗದವರಿಗೆ ವರದಾನವಾಗಿದೆ. ನನ್ನ ಕ್ಷೇತ್ರದಲ್ಲೂ ದಿನನಿತ್ಯವು ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ನಡೆದುಕೊಂಡು ಬರುತ್ತಿವೆ ಎಂದರು.
ಮುಖ್ಯ ಭಾಷಣಕಾರ ನಿಕೀತ್ ರಾಜ್ ಮೌರ್ಯ ಮಾತನಾಡಿ, 538 ವರ್ಷಗಳ ಹಿಂದೆ ಹುಟ್ಟಿದ ದರ್ಶನಿಕರು ಶ್ರೀ ಕನಕದಾಸರು. ಕನಕದಾಸರು ಅಂದು ಹಾಡಿದ ನುಡಿ ಇಂದಿಗೂ ಜೀವಂತವಾಗಿದೆ ಎಂದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಜೂನಿಯರ್ ಕಾಲೇಜು ಮೈದಾನದಲ್ಲಿ ಶ್ರೀ ಕನಕದಾಸರ ಭಾವಚಿತ್ರ ಮೆರವಣಿಗೆ ಕಾರ್ಯಕ್ರಮಕ್ಕೆ ಶಾಸಕ ದರ್ಶನ್ ಹಾಗೂ ವಿಧಾನ ಪರಿಷತ್ ಸದಸ್ಯ ಡಾ, ಯತೀಂದ್ರ ಚಾಲನೆ ನೀಡಿದರು. ಮೆರವಣಿಗೆಯು ಆರ್ ಪಿ ರಸ್ತೆಯ ಮೂಲಕ ಶ್ರೀ ನಂಜುಂಡೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಕೊನೆಗೊಂಡಿತು. ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾತಂಡಗಳು ಭಾಗವಹಿಸಿ ಮೆರುಗು ನೀಡಿದವು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಕನಕ ಜಯಂತೋತ್ಸವ ಆಚರಣಾ ಸಮಿತಿಯ ಅಧ್ಯಕ್ಷ ತಾಂಡವಪುರ ಮೋಹನ್ ಕುಮಾರ್, ಮೆರವಣಿಗೆ ಸಮಿತಿ ಅಧ್ಯಕ್ಷ ಸಿದ್ದರಾಜು, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಹಾಡ್ಯ ರಂಗಸ್ವಾಮಿ, ಮಾಜಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಸಿ ಬಸವರಾಜು, ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ವಿದ್ಯಾಸಾಗರ್, ಮಾಜಿ ಜಿಪಂ ಅಧ್ಯಕ್ಷೆ ಲತಾ ಸಿದ್ದಶೆಟ್ಟಿ, ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಮಾರುತಿ, ಬಗರ್ ಹುಕುಂ ಸಮಿತಿಯ ಸದಸ್ಯೆ ಜಯಮಾಲಾ ಬೀರೇಗೌಡ, ರಾಜ್ಯ ಕುರುಬರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ, ಬಿ.ಎನ್ ರಾಮು, ಸಿದ್ದರಾಜು, ಕೆಂಪಣ್ಣ, ಸಿಎಂ ಶಂಕರ್, ಪ್ರಭಾವತಿ, ಕುರಿಹುಂಡಿ ರಾಜಣ್ಣ, ಬಸವಣ್ಣ, ಪ್ರಚಾರ ಸಮಿತಿಯ ಅಧ್ಯಕ್ಷ ಬೀರೇಗೌಡ, ಕುಳ್ಳಯ್ಯ, ತಹಶೀಲ್ದಾರ್ ಶಿವಕುಮಾರ್ ಕಾಸನೂರು, ನಗರಸಭಾ ಆಯುಕ್ತ ಬಸವರಾಜು, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಜರಾಲ್ಡ್ ರಾಜೇಶ್, ಸೇರಿದಂತೆ ಹಲವರು ಹಾಜರಿದ್ದರು.





