ಪ್ರಕೃತಿಯೊಂದಿಗೆ ನಂಟನ್ನು ನೆನಪಿಸುವ ಒಂದು ಸುಂದರ ಪಯಣ.
15 ಎಕರೆ ವಿಸ್ತೀರ್ಣ, 70 ಸಸ್ಯಶಾಸ್ತ್ರೀಯ ಜಾತಿಯ 327ಕ್ಕೂ ಹೆಚ್ಚಿನ ವೈವಿಧ್ಯಮಯ ಸಸ್ಯ
ಪ್ರಶಾಂತ್ ಎಸ್
ಮೈಸೂರು: ನಗರದ ಮತ್ತೊಂದು ತಾಣವಾದ ಲಿಂಗಾಂಬುಧಿ ಕೆರೆ ಮತ್ತು ಸಸ್ಯತೋಟ ಆವರಣದಲ್ಲಿ ಭಾನುವಾರ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿದ್ದು ʻಪುಷ್ಪಮೇಳ ಮತ್ತು ಸಸ್ಯತೋಟ ಭೇಟಿʼ ಎಂಬ ವಸ್ತು ವಿಷಯದೊಂದಿಗೆ ಪ್ರಕೃತಿಯ ಮಡಿಲಲ್ಲಿ ಮತ್ತೊಂದು ಪುಷ್ಪಲೋಕವನ್ನು ಅರಳಿಸಿತು.
ಕಲೆಯಲ್ಲಿ ರೂಪುಗೊಂಡಿರುವ ಪ್ರವೇಶ ಕಮಾನುದ್ವಾರ : ಹೂಗಳ ಹೃದಯಸ್ಪರ್ಶಿ ಸ್ವಾಗತ ಪ್ರವಾಸಿಗರನ್ನು ಸ್ವಾಗತಿಸಿತು. ಇದರೊಂದಿಗೆ ಬಿದಿರಿನಿಂದ ನಿರ್ಮಿಸಲಾದ ʻಸ್ಕೈವಾಕ್ʼ, ಹೂಗಳಿಂದ ಅಲಂಕರಿಸಲಾದ ಎರಡು ಆನೆಗಳ ಆಕೃತಿಗಳು, ಕಣ್ಮನ ಸೆಳೆಯುವ ವಿವಿಧ ಬಗೆಯ ಸಸ್ಯಗಳ ತೋಟ… ಹೃದಯಾಕಾರದ ಕಮಾನುಗಳು ಪುಷ್ಪಮೇಳ ಮತ್ತು ಸಸ್ಯ ತೋಟಟ ಪ್ರದರ್ಶನ ಮತ್ತಷ್ಟು ಮೆರುಗು ತುಂಬಲಿವೆ. ಇಲ್ಲಿನ ಸಸ್ಯ ಪಥದಿಂದ ಪುಷ್ಪ ತೋಟದವರೆಗೆ ಕಲ್ಲಿನ ಹಾಸು,ವಿವಿಧ ಬಗೆಯ ಹೂಗಳ ಪ್ರತಿಕೃತಿಗಳು ಪ್ರಕೃತಿ ಪ್ರಿಯರಿಗೆ ಹೊಸ ಅನುಭವ ನೀಡಿತು.
ಲಿಂಗಾಂಬುಧಿ ಸಸ್ಯತೋಟದ ಪ್ರಮುಖ ಆಕರ್ಷಣೆ : ಲಿಂಗಾಂಬುಧಿ ಸಸ್ಯತೋಟದ ಮತ್ತೊಂದು ಪ್ರಮುಖ ಆಕರ್ಷಣೆ 60 ಅಡಿ ಎತ್ತರದ ಬರ್ಡ್ ವ್ಯೂ ಟವರ್. ಈ ಗೋಪುರದ ಮೇಲೆ ನಿಂತು ಕಣ್ಣು ಹಾಯಿಸಿದರೆ… ಇಡೀ ಲಿಂಗಾಂಬುಧಿ ಬಟಾನಿಕಲ್ ಗಾರ್ಡನ್ನ ಸ್ವಚ್ಛಂದ ಹಸಿರು, ಸಸ್ಯಸಂಪತ್ತು ಮತ್ತು ಪಕ್ಷಿ ಸಂಕುಲದ ಚಿತ್ತಾರ ಕಣ್ಮುಂದೆ ತೆರೆದುಕೊಳ್ಳಲಿದೆ. ಮಡಿಕೆ ಪ್ರತಿಕೃತಿ ಅಲಂಕಾರ, 10 ಅಡಿ ಎತ್ತರದ ಬಾಹುಬಲಿ ಪ್ರತಿಮೆ, ಚಾವುಂಡರಾಯನ ಪ್ರತಿಕೃತಿ ಇವೆಲ್ಲವೂ ಈ ತಾಣದ ಸೌಂದರ್ಯಕ್ಕೆ ಮತ್ತೊಂದು ಆಯಾಮ ನೀಡುವುದರ ಜೊತೆಗೆ ಸ್ಥಳೀಯ ಹಾಗೂ ಅಳಿವಿನಂಚಿನಲ್ಲಿರುವ ಹೂವುಗಳ ಪ್ರದರ್ಶನದ ಮೂಲಕ ನಮ್ಮ ನೆಲದ ಸಸ್ಯ ಸಂಪತ್ತಿನ ವೈವಿಧ್ಯತೆಯ ಪರಿಚಯವನ್ನು ಮಾಡಿಕೊಡುವ ವಿಶೇಷತೆ ಹೊಂದಿತ್ತು.
25 ಸಾವಿರಕ್ಕೂ ಹೆಚ್ಚು ಗಿಡ ಮರಗಳ ಪ್ರದರ್ಶನ : ನಾನಾ ಬಗೆಯ ಫಲ ಪುಷ್ಪಗಳು ನೋಡುಗರ ಮನಸೂರೆಗೊಳಿಸುತ್ತಿವೆ. ಆಲಂಕಾರಿಕ, ಔಷಧೀಯ ಸಸ್ಯಗಳು ಸೇರಿದಂತೆ ವಿವಿಧ ಬಗೆಯ ಫಲ ಪುಷ್ಪಗಳು ನೋಡುಗರ ಕಣ್ಣಿಗೆ ತಂಪೆರೆಯುತ್ತಿವೆ. ಒಂದೇ ವೇದಿಕೆಯಲ್ಲಿ ಫಲಪುಷ್ಪ ಪ್ರದರ್ಶನ, ಹೂವಿನಲ್ಲಿ ಅರಳಿದ ನಾನಾ ಕಲಾಕೃತಿಗಳು, ತರಕಾರಿ, ಹಣ್ಣಿನಲ್ಲಿ ಮೂಡಿದ ವಿವಿಧ ಪ್ರಾಣಿ, ಪಕ್ಷಿಗಳ ಕಲಾಕೃತಿಗಳು ಆಕರ್ಷಕವಾಗಿವೆ.
ಔಷಧ ಮತ್ತು ಸುಗಂಧ ಸಸ್ಯಗಳಲ್ಲಿ ವಿವಿಧ ತಳಿಗಳ ಪ್ರದರ್ಶನ : ವಿವಿಧ ರೋಗ ನಿರೋಧಕ ಸಸ್ಯಗಳ ಬಗ್ಗೆ ಕುತೂಹಲದಿಂದ ಸಾರ್ವಜನಿಕರು ಮಾಹಿತಿ ಪಡೆಯುತ್ತಿದ್ದುದು ಕಂಡು ಬಂತು. ಸಣ್ಣ ಆಕಾರದ ಆಲ, ಅರಳಿ, ಮಾವು, ಹುಣಸೆ, ಅತ್ತಿ ಸೇರಿದಂತೆ ಸಪ್ಲೇರಾ ಸಸ್ಯಗಳು ನೋಡುಗರ ಗಮನ ಸೆಳೆದಿವೆ. ಇದಲ್ಲದೇ ಜಲಕೃಷಿ ಮಾದರಿಗಳು ಫಲ ಪುಷ್ಪ ಮೇಳದಲ್ಲಿ ಗಮನ ಸೆಳೆದವು. ಅದರಲ್ಲೂ ಜಲಕೃಷಿಯಲ್ಲಿ ಬೆಳೆದು ನಿಂತ ಸುಧಾರಿತ ತಳಿಯ ಹಕ್ಕರಕಿ, ಶುಂಠಿ, ಜರ್ಬರಾ ಹೂಗಳು ನೋಡುಗರ ಚಿತ್ತ ಸೆಳೆದವು.




