50 ಕೋಟಿ ರೂ ಮಂಜೂರು : ಸಚಿವ ಸಂಪುಟದ ಅನುಮೋದನೆ.
ಬೆಂಗಳೂರು: ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಎಸ್. ರಸ್ತೆಯಲ್ಲಿರುವ ಪಿ.ಕೆ.ಟಿ.ಬಿ ಆಸ್ಪತ್ರೆಯ ಆವರಣದಲ್ಲಿರುವ ಸುಮಾರು 7 ಎಕರೆ ಜಾಗದಲ್ಲಿ ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆಯ ಕಟ್ಟಡವನ್ನು ನಿರ್ಮಿಸಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದ್ದು, ಸ್ಥಳ ಹಾಗೂ 50 ಕೋಟಿ ರೂ. ಅನುದಾನವನ್ನು ಮಂಜೂರು ಮಾಡಲಾಗಿದೆ.
ಇತ್ತೀಚೆಗೆ ಮೈಸೂರಿನಲ್ಲಿ ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಡಾ.ಕೆ.ಸುಧಾಕರ್ ಅವರು ಪ್ರಗತಿ ಪರಿಶೀಲನಾ ಸಭೆಯ ನಂತರ ಸುಮಾರು 110 ಕೋಟಿ ರೂ. ವೆಚ್ಚದಲ್ಲಿ ಮೈಸೂರಿನಲ್ಲಿ ಸುಸಜ್ಜಿತ ಕಿದ್ವಾಯಿ ಆಸ್ಪತ್ರೆ ನಿರ್ಮಾಣದ ರೂಪುರೇಷೆಗಳನ್ನು ತಿಳಿಸಿ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಇದಕ್ಕೆ ಒಪ್ಪಿಗೆ ನೀಡಲಾಗುವುದು ಎಂದು ತಿಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
262 ಹೊಸ 108 ಆಂಬ್ಯುಲೆನ್ಸ್ ಖರೀದಿಗೆ 98.9 ಕೋಟಿ ರೂ. ನೀಡಲು ಸಂಪುಟ ಅಸ್ತು ಎಂದಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು. ಸಚಿವ ಸಂಪುಟ ಸಭೆುಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಪ್ರೋತ್ಸಾಹ ನೀಡಲು ಕರ್ನಾಟಕ ವಿಶೇಷ ಹೂಡಿಕೆ ಪ್ರದೇಶ ಅಧಿನಿಯಮಕ್ಕೆ ಅಸ್ತು ಎನ್ನಲಾಗಿದೆ. ಗುಜರಾತ್ ಮಾದರಿಯಲ್ಲಿ ಸ್ವಲ್ಪ ಬದಲಾಯಿಸಿಕೊಂಡು ರಾಜ್ಯದಲ್ಲಿ ಜಾರಿ ಡಲಾಗುವುದು. ತುಮಕೂರು, ಧಾರವಾಡದಲ್ಲಿ ವಿಶೇಷ ಹೂಡಿಕೆ ವಲಯ ಸ್ಥಾಪನೆಯಾಗಲಿದೆ. ಇನ್ನು ಕೆಐಎಡಿಬಿಯಿಂದಲೇ ಮೇಲ್ವಿಚಾರಣೆ ಮಾಡಲು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು.
ಮೂವರು ಕೆಎಎಸ್ ಅಧಿಕಾರಿಗಳಾದ ನಾಗರಾಜ್, ಅರುಣ ಪ್ರಭ, ಅಪರ್ಣ ಮೇಲಿನ ಲೋಕಾಯುಕ್ತ ಪ್ರಕರಣ ಕೈ ಬಿಡಲು ಸಂಪುಟ ತೀರ್ಮಾನಮಾಡಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಹೊಸದಾಗಿ ಎರಡು ಕ್ರಿಕೆಟ್ ಕ್ರೀಡಾಂಗಣಗಳ ನಿರ್ಮಾಣಕ್ಕೆ ಸಂಪುಟ ಅನುಮೋದನೆ ನೀಡಿದೆ. ಬಳ್ಳಾರಿಯಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಅಕಾಡೆಮಿಗೆ 19.26 ಎಕರೆ ಭೂಮಿ ನೀಡಲು ತೀರ್ಮಾನ ಮಾಡಲಾಗಿದೆ ಜತೆಗೆ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲ್ಲೂಕಿನ ಕಬಕದಲ್ಲಿ ಕ್ರೀಡಾಂಗಣ ನಿರ್ವಾಣಕ್ಕೆ 23.25ಎಕರೆ ಜಮೀನು ನೀಡಲು ಸಂಪುಟ ಹಸಿರು ನಿಶಾನೆ ನೀಡಿದೆ ಎಂದು ಹೇಳಿದರು.ಇನ್ನು ಸಾರಿಗೆ ವಾಹನಗಳಿಗೆ ಎಮರ್ಜೆನ್ಸಿ ಪ್ಯಾನಿಕ್ ಬಟನ್ ಅಳವಡಿಕೆಯಾಗಲಿದೆ. ಕೇಂದ್ರ ಸಹಭಾಗಿತ್ವದಲ್ಲಿ 20.36 ಕೋಟಿ ವೆಚ್ಚದಲ್ಲಿ ಅಳವಡಿಕೆಗೆ ಅಸ್ತು ಅನ್ನಲಾಗಿದೆ.
ಪ್ರತಾಪ್ ಸಿಂಹ ಕೃತಜ್ಞತೆ
ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಎಸ್. ರಸ್ತೆಯಲ್ಲಿರುವ ಪಿ.ಕೆ.ಟಿ.ಬಿ ಆಸ್ಪತ್ರೆಯ ಆವರಣದಲ್ಲಿರುವ ಸುಮಾರು 7ಎಕರೆ ಜಾಗದಲ್ಲಿ ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆಯ ಕಟ್ಟಡವನ್ನು ನಿರ್ಮಿಸಲು ಸ್ಥಳ ಹಾಗೂ 50 ಕೋಟಿ ಅನುದಾನವನ್ನು ನೀಡುವ ಸಂಬಂಧ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿರುವುದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಉಸ್ತುವಾರಿ ಸಚಿವರಾದ ಎಸ್.ಟಿ. ಸೋಮಶೇಖರ್ , ವೈದ್ಯಕೀಯ ಶಿಕ್ಷಣ ಖಾತೆ ಸಚಿವ ಡಾ.ಕೆ.ಸುಧಾಕರ್, ಹಾಗೂ ಈ ಕಾರ್ಯಕ್ರಮಕ್ಕೆ ಸಹಕರಿಸಿದ ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಅವರಿಗೆ ಸಂಸದ ಪ್ರತಾಪ್ ಸಿಂಹ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.