ಹುಣಸೂರು : ಕೇಬಲ್ ಆಪರೇಟರ್ ಒಬ್ಬರು ನದಿಗೆ ಹಾರಿದ್ದು, ಮೃತದೇಹಕ್ಕಾಗಿ ಅಗ್ನಿಶಾಮಕ ಸಿಬ್ಬಂದಿ ನದಿಯಲ್ಲಿ ಹುಡುಕಾಟ ನಡೆಸುತ್ತಿದ್ದಾರೆ.
ನಗರದ ಸಮೀಪದ ಮೂಕನಹಳ್ಳಿ ನಿವಾಸಿ ಕೇಬಲ್ ಆಪರೇಟರ್ ಪುರುಷೋತ್ತಮ್(೪೮) ನದಿಗೆ ಹಾರಿದವರು.
ಪುರುಷೋತ್ತಮ್ ಗ್ರಾಮದ ಡೇರಿ ನಿರ್ದೇಶಕರಾಗಿದ್ದರು. ಇವರು ಕೇಬಲ್ ಆಪರೇಟರ್ ವೃತ್ತಿ ನಡೆಸುತ್ತಿದ್ದರಲ್ಲದೆ ಆಟೋ, ಟ್ರಾಕ್ಟರ್ ಇಟ್ಟುಕೊಂಡಿದ್ದರು. ಶನಿವಾರ ರಾತ್ರಿ ೯ರ ಸುಮಾರಿಗೆ ಹೊಸ ಸೇತುವೆ ಬಳಿಯಲ್ಲಿ ಆಟೋ ನಿಲ್ಲಿಸಿ, ಮೊಬೈಲ್, ಚಪ್ಪಲಿಯನ್ನು ಅಲ್ಲೇ ಬಿಟ್ಟು ಲಕ್ಷ್ಮಣತೀರ್ಥ ನದಿಗೆ ಹಾರಿದ್ದಾರೆ. ಇದನ್ನು ಕಂಡ ದಾರಿ ಹೋಕರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲಿಸಿದ ವೇಳೆ ಆಟೋ ಪುರುಷೋತ್ತಮ್ ಅವರಿಗೆ ಸೇರಿದ್ದು ಎಂದು ತಿಳಿದು ಬಂದಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ರಾತ್ರಿಯಾಗಿದ್ದರಿಂದ ಭಾನುವಾರ ಬೆಳಿಗ್ಗೆ ನದಿಯಲ್ಲಿ ಬೋಟ್ ಮೂಲಕ ತಪಾಸಣೆ ನಡೆಸಿದರಾದರೂ ಶವ ಪತ್ತೆಯಾಗಿಲ್ಲ.
ಸ್ನೇಹಿತರಿಗೆ ಕರೆ ಮಾಡಿದ್ದರು : ನದಿಗೆ ಹಾರುವ ಮುನ್ನ ಸ್ನೇಹಿತರಿಗೆ ಕರೆ ಮಾಡಿ ತಾನು ನದಿಗೆ ಹಾರಿ ಸಾಯುತ್ತೇನೆ ಎಂದು ಹೇಳಿದ್ದರು. ಕೊನೆಗೆ ಪುರುಷೋತ್ತಮ್ ಸಹೋದರ ತಾ.ಪಂ.ಮಾಜಿ ಸದಸ್ಯ ರವಿಪ್ರಸನ್ನ ಅವರಿಗೆ ವಿಷಯ ತಿಳಿಸಿದ್ದು, ಹುಡುಕಾಟ ನಡೆಸಿದ ವೇಳೆ ಹೊಸ ಸೇತುವೆ ಬಳಿ ನಿಲ್ಲಿಸಿದ್ದ ಆಟೋ ಇರುವುದು ಕಂಡುಬಂದಿದೆ.
ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರ್ಥಿಕವಾಗಿ ಸಾಕಷ್ಟು ಅನುಕೂಲಸ್ಥರಾಗಿರುವ ಪುರುಷೋತ್ತಮ್ ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ತಿಳಿದು ಬಂದಿಲ್ಲ.




