ಮೈಸೂರು: ತಾಲ್ಲೂಕಿನ ಬಡಗಲಹುಂಡಿ ಗ್ರಾಮದ ಬಳಿ ನಾಲೆಗೆ ಬಿದ್ದ ಬಾಲಕನನ್ನು ರಕ್ಷಿಸಲು ಹೋಗಿ ಸಹೋದರರು ನೀರು ಪಾಲಾಗಿರುವ ಘಟನೆ ನಡೆದಿದೆ.
ನಂದನ್ ಹಾಗೂ ರಾಕೇಶ್ ಎಂಬುವವರೇ ಮೃತ ದುರ್ದೈವಿಗಳಾಗಿದ್ದಾರೆ. ಬಡಗಲಹುಂಡಿ ಗ್ರಾಮದ ರಮೇಶ್ ಪುತ್ರರಾದ ನಂದನ್ ಹಾಗೂ ರಾಕೇಶ್ ಅವರು ವರುಣ ನಾಲೆಯಲ್ಲಿ ನೀರಿನಲ್ಲಿ ಸಿಲುಕಿದ್ದ ಬಾಲಕನನ್ನು ರಕ್ಷಣೆ ಮಾಡಲು ಹೋಗಿ ಪ್ರಾಣ ಕಳೆದುಕೊಂಡಿದ್ದಾರೆ.
ನಾಲೆಯಲ್ಲಿ ಕೊಂಬೆ ಹಿಡಿದುಕೊಂಡಿದ್ದ ಬಾಲಕನ ರಕ್ಷಣೆಗೆ ಇಬ್ಬರು ಧಾವಿಸಿದ್ದಾರೆ. ಈ ವೇಳೆ ನಾಲೆಯಲ್ಲಿ ಕೊಚ್ಚಿಕೊಂಡು ಹೋಗಿ ಸಾವನ್ನಪ್ಪಿದ್ದಾರೆ. ಮರದ ಕೊಂಬೆ ನೆರವಿನಿಂದ ಬಾಲಕ ಪಾರಾಗಿದ್ದಾನೆ.
ಈ ಸಂಬಂಧ ವರುಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೆ.ಆರ್.ಆಸ್ಪತ್ರೆಯಲ್ಲಿ ಯುವಕರ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಇನ್ನು ಮೃತ ನಂದನ್ ಕಳೆದ 15 ದಿನಗಳ ಹಿಂದೆಯಷ್ಟೇ ಪ್ರೀತಿಸಿ ವಿವಾಹವಾಗಿದ್ದ ಎನ್ನಲಾಗಿದೆ.





