ಮೈಸೂರು: ಭತ್ತದ ಗದ್ದೆಗಳಲ್ಲಿ ಬೆಂಕಿ ರೋಗ ಕಾಣಿಸಿಕೊಂಡಿರುವ ಪರಿಣಾಮ ರೈತರಿಗೆ ಮತ್ತೊಂದು ಆತಂಕ ಮನೆಮಾಡಿದೆ.
ಹುಣಸೂರು ತಾಲ್ಲೂಕಿನ ಹನಗೋಡು ನಾಲೆ ವ್ಯಾಪ್ತಿಗೆ ಬರುವ ಎಲ್ಲಾ ಗದ್ದೆಗಳಲ್ಲಿ ಈ ಸಮಸ್ಯೆ ಕಂಡುಬಂದಿದ್ದು, ರೈತರು ಫಸಲು ನಷ್ಟವಾಗುವ ಆತಂಕದಲ್ಲಿದ್ದಾರೆ.
ಬೆಳೆದಿರುವ ಭತ್ತದ ಬೆಳೆಯ ಗರಿ ಸಂಪೂರ್ಣ ಒಣಗಿ ಹೋಗಿ ಹಳದಿ ಬಣ್ಣಕ್ಕೆ ತಿರುಗಿದ್ದು, ಭತ್ತ ಮುಂದಿನ ದಿನಗಳಲ್ಲಿ ಜೊಳ್ಳಾಗುವ ಆತಂಕ ಮನೆಮಾಡಿದೆ.
ಕಳೆದ ವರ್ಷ ಮಳೆ ಕಡಿಮೆಯಾಗಿ ಕಾಲುವೆಯಲ್ಲಿ ನೀರಿನ ಹರಿವು ತೀವ್ರ ಕಡಿಮೆಯಾಗಿತ್ತು. ಆದರೆ ಈ ಬಾರಿ ಉತ್ತಮ ಮಳೆಯಾಗಿ ಲಕ್ಷ್ಮಣತೀರ್ಥ ನದಿಯಲ್ಲಿ ಪ್ರವಾಹ ಉಂಟಾಗಿತ್ತು.
ಈ ಹಿನ್ನೆಲೆಯಲ್ಲಿ ನಾಲೆಗಳಿಗೂ ಕೂಡ ನೀರನ್ನು ಬಿಡಲಾಗಿದೆ. ಪರಿಣಾಮ ಈ ಬಾರಿ ಜಾಸ್ತಿ ಬೆಳೆ ಬೆಳೆಯಬಹುದು ಎಂಬ ಅಂದಾಜಿನಲ್ಲಿದ್ದ ರೈತರು, ಈ ಬೆಂಕಿ ರೋಗದಿಂದ ತೀವ್ರ ಕಂಗಾಲಾಗಿದ್ದಾರೆ.
ಈ ಬಾರಿಯ ಬೆಳೆಯಿಂದ ಸಾಲವನ್ನು ತೀರಿಸಿಕೊಳ್ಳಬಹುದು ಎಂದು ಅಂದಾಜು ಮಾಡಿದ್ದ ರೈತರು ಈಗ ದಿಕ್ಕು ತೋಚದೇ ಕಂಗಾಲಾಗಿದ್ದಾರೆ ಎನ್ನಲಾಗಿದೆ.