ಮೈಸೂರು: ಮಹಾರಾಜರು ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾದ ಬೆನ್ನಲ್ಲಿ ನನಗೆ ಹಲವು ಗೊಂದಲಗಳಿದ್ದು, ಅವುಗಳನ್ನು ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಒಂದೆರೆಡು ಪ್ರಶ್ನೆಗೆ ಕೇಳಿದ್ದೆ ವಿನಃ ಮಹಾರಾಜರ ವಿರುದ್ಧ ಮಾತನಾಡಲು ಅಲ್ಲ. ಈ ಬಗ್ಗೆ ಮಾಧ್ಯಮಗಳು ತಪ್ಪು ಮಾಹಿತಿ ನೀಡುವುದು ಬೇಡ ಎಂದು ಸಂಸದ ಪ್ರತಾಪ್ ಸಿಂಹ ಮನವಿ ಮಾಡಿದ್ದಾರೆ.
ಮೈಸೂರಿನಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ರಾಜ ಯದುವೀರ್ ಅವರಿಗೆ ಟಿಕೆಟ್ ಘೋಷಣೆಯಾದ ನಂತರ ನಾನು ಮಹಾರಾಜರಿಗೆ ಕರೆ ಮಾಡಿ ನಿಮ್ಮ ಎಲೆಕ್ಷನ್ ಏಜೆಂಟ್ ಆಗಿ ಕೆಲಸ ಮಾಡುತ್ತೇನೆ ಎಂದು ಹೇಳಿದ್ದೇನೆ. ನನಗೆ ಪಕ್ಷ ತಾಯಿ ಇದ್ದಂತೆ, ಪಕ್ಷಕ್ಕೆ ನಾನೊಬ್ಬ ಲಾಯಲ್ ಸೋಲ್ಜರ್. ನಾನು ಎಂದಿಗೂ ಪಕ್ಷಕ್ಕೂ ದ್ರೋಹ ಮಾಡುವುದಿಲ್ಲ, ಪಕ್ಕದವರಿಗೂ ದ್ರೋಹ ಮಾಡುವುದಿಲ್ಲ ಎಂದರು.
ಹೈಕಮಾಂಡ್ ತಮಗೆ ಯಾಕೆ ಟಿಕೆಟ್ ತಪ್ಪಿಸಿದರು ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ, 2014 ರಲ್ಲಿ ನನಗೆ ಯಾಕೆ ಟಿಕೆಟ್ ಕೊಟ್ಟರು ಅಂತಾ ಹೈಕಮಂಡ್ ಹೇಳಿರಲಿಲ್ಲ. ನಾನೊಬ್ಬ ಸೂಕ್ತ ಅಭ್ಯರ್ಥಿ ಎಂದು ಆಯ್ದಿರಿಸಿದ್ದರು. ನಾನು ಯಾಕೆ ಕೊಟ್ಟರಿ ಅಂತಾ ಕೇಳಿರಲಿಲ್ಲ. ಈಗಲೂ ಅಷ್ಟೇ ಯಾಕೆ ಟಿಕೆಟ್ ತಪ್ಪಿಸಿದ್ದೀರಿ ಅಂತಾ ನಾನು ಕೇಳಿಯೂ ಇಲ್ಲ. ಅದನ್ನು ಒಪ್ಪಿಸುವ ಅನಿವಾರ್ಯತೆ ಪಕ್ಷಕ್ಕಿಲ್ಲ ಎಂದು ಪ್ರತಾಪ್ ಸಿಂಹ ಹೇಳಿದರು.
ಕಾಂಗ್ರೆಸ್ ಪಕ್ಷದಿಂದ ಆಫರ್ ಇತ್ತು ಇಲ್ವಾ ಎಂಬ ಯಾವ ಪ್ರಶ್ನೆಗಳು ಈಗ ಪ್ರಸ್ತುತ ಅಲ್ಲ. ನಮಗೆ ಯದುವೀರ್ ಅವರನ್ನು ಗೆಲ್ಲಿಸುವುದಷ್ಟೇ ಈಗ ಮುಖ್ಯ. ದೇಶಕ್ಕೆ ಮೋದಿ ಬೇಕು, ಮೋದಿ ಪರವಾಗಿ ಕೈ ಎತ್ತಲು ಮೈಸೂರಿನಿಂದ ಒಬ್ಬ ವ್ಯಕ್ತಿ ಬೇಕು ಇದಷ್ಟೇ ನಮಗೆ ಮುಖ್ಯ. ಕಾಂಗ್ರೆಸ್‌ನಿಂದ ನನಗೆ ಯಾವುದೇ ಆಫರ್ ಬಂದಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ಇವರಿಗೆ ಜೊತೆಯಾಗಿ ಮೈಸೂರು ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕ ಶ್ರೀವಸ್ತ, ಮಾಜಿ ಶಾಸಕರಾದ ಎಲ್. ನಾಗೇಂದ್ರ, ಎಸ್.ಎ ರಾಮದಾಸ್, ನಟಿ ಮಾಳವಿಕಾ ಇದ್ದರು.