ಮೈಸೂರು : ಎಲ್ಲಾ ವಿಚಾರಗಳನ್ನು ಒಳಗಡೆ ಕುಳಿತು ಮಾತನಾಡಿ ಬಗೆಹರಿಸಿಕೊಳ್ಳಬೇಕು. ಪಕ್ಷದ ದೃಷ್ಟಿಯಿಂದ ಹೊರಗಡೆ ಎಲ್ಲರೂ ಒಟ್ಟಿಗೆ ಧ್ವನಿ ಎತ್ತಬೇಕು. ರಾಜ್ಯಾಧ್ಯಕ್ಷರು ಈಗಾಗಲೇ ಮಾತನಾಡುತ್ತೇನೆ ಎಂದು ಹೇಳಿದ್ದಾರೆ. ಹಾಗೆಯೇ ಸಮಸ್ಯೆಯನ್ನು ಬಗೆಹರಿಸುತ್ತಾರೆ ಎಂಬ ನಂಬಿಕೆಯಿದೆ ಎಂದು ಮೈಸೂರು-ಕೊಡಗು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ಪಕ್ಷದ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಏನೇ ಸಮಸ್ಯೆಗಳಿದ್ದರೂ ಕುಳಿತು ಮಾತನಾಡುವ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಫೈನಾನ್ಸ್ ಕಿರುಕುಳ; ಹೆಚ್ಚಿನ ಕ್ರಮ ಅಗತ್ಯ
ಮೈಕ್ರೋ ಫೈನಾನ್ಸ್‌ನವರು ಸಾಲ ಮರುಪಾವತಿಗಾಗಿ ಕಿರುಕುಳ ನೀಡುತ್ತಿದ್ದಾರೆ. ಈ ಸಮಯದಲ್ಲಿ ಸರ್ಕಾರ ಸ್ನೇಹಿತನಂತೆ ವರ್ತಿಸಬೇಕಿದೆ. ಈ ವಿಚಾರದಲ್ಲಿ ರಾಜ್ಯ ಸರ್ಕಾರ ಇನ್ನೂ ಹೆಚ್ಚಿನ ಕ್ರಮ ತೆಗೆದುಕೊಳ್ಳಬೇಕಿದೆ ಎಂದು ತಿಳಿಸಿದರು.
ಕೇಂದ್ರ ಬಜೆಟ್ ಮೇಲೆ ನಿರೀಕ್ಷೆಗಳು
ಮೈಸೂರಿಗೆ ಈ ಬಜೆಟ್‌ನಲ್ಲಿ ಸಾಕಷ್ಟು ವಿಚಾರಗಳಿಗೆ ಮನವಿ ಮಾಡಿದ್ದೇನೆ. ಆದರೆ ಈಗಾಗಲೇ ಆಗಿರುವ ಕೆಲಸಗಳೇ ಬಾಕಿ ಇದೆ. ರೈಲು ನಿಲ್ದಾಣದ ಎರಡನೇ ಪ್ರವೇಶ ದ್ವಾರದ ಅಭಿವೃದ್ಧಿ, ಮೈಸೂರು-ಕುಶಾಲನಗರ ಹೆದ್ದಾರಿ, ಮಣಿಪಾಲ್ ಆಸ್ಪತ್ರೆ ಬಳಿಯ -ಓವರ್, ಮೈಸೂರು -ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅನೇಕ ಕೆಲಸಗಳು ಆಗಬೇಕಿದೆ.
ಕೊಡಗಿನ ಚಿಕ್ಕ ಚಿಕ್ಕ ಹಾಡಿಗಳಿಗೆ ರಸ್ತೆ, ಇದರ ಜೊತೆಗೆ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಮೈಸೂರಿನಲ್ಲಿರುವ ಹಳೆಯ ಡಿಸಿ ಕಚೇರಿಯನ್ನು ಮ್ಯೂಸಿಯಂ ಮಾಡಬೇಕು. ಮೈಸೂರಿನಲ್ಲಿ ಯೋಗಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದೇನೆ. ನಗರದ ಎಲ್‌ಐಸಿ ವೃತ್ತದಲ್ಲಿ ಅರ್ಜುನ ಆನೆಯ ಪ್ರತಿಮೆ ಸ್ಥಾಪನೆ ಆಗಬೇಕು. ಅದಕ್ಕೆ ನಗರಪಾಲಿಕೆಗೆ ಕೂಡಾ ಮನವಿ ಮಾಡಿದ್ದೇನೆ ಎಂದು ಹೇಳಿದರು.