ಮೈಸೂರು : ಕೇಂದ್ರ ಕಾರ್ಮಿಕ ಸಂಘಗಳ ಒಕ್ಕೂಟ ಕರೆ ನೀಡಿದ ರಾಷ್ಟ್ರವ್ಯಾಪ್ತಿ ಭಾರತ್ ಬಂದ್ ರಾಜಧಾನಿ ಬೆಂಗಳೂರು ಸೇರಿದಂತೆ ಮೈಸೂರು, ಮಂಡ್ಯ, ಚಾಮರಾಜನಗರ,ಕೊಡಗು ಜಿಲ್ಲೆಗಳು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಪ್ರತಿಭಟನೆಗೆ ಸೀಮಿತವಾಗಿತ್ತು.
ಭಾರತ್ ಬಂದ್ ಇದ್ದರೂ ಕೂಡೂ ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಂಗಡಿ ಮಳಿಗೆಗಳು ತೆರೆದಿದ್ದವು. ಆಟೋ-ಬಸ್‌ಗಳು ರಸ್ತೆಗಿಳಿದಿದ್ದವು. ಬಹುತೇಕ ಕನ್ನಡಪರ ಸಂಘಟನೆಗಳು ಬಂದ್‌ಗೆ ಬೆಂಬಲ ಸೂಚಿಸಿದ್ದವು.
ಹಲವಾರು ಚಳವಳಿಗಳ ಮೂಲಕ ಗಮನ ಸೆಳೆದಿದ್ದ ಮೈಸೂರಿನಲ್ಲಿ ಬುಧವಾರ ಸಾರ್ವತ್ರಿಕ ಮುಷ್ಕರ ಪ್ರತಿಭಟನಾ ಮೆರವಣಿಗೆ ಹಾಗೂ ಬಹಿರಂಗ ಸಭೆಗೆ ಮಾತ್ರ ಸೀಮಿತವಾಯಿತು.
ಬೆಂಗಳೂರಿನ ಫ್ರೀಡಂ ಪಾರ್ಕ್‌ನ ಮೈದಾನದಲ್ಲಿ ಕಾರ್ಮಿಕ ಸಂಘಟನೆಗಳು ಜಂಟಿ ಸಮಿತಿಯು ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದವು.
ಬಂದ್‌ಗೆ ಮೈಸೂರಿನ ಪ್ರತಿಕ್ರಿಯೆ ಹೀಗಿತ್ತು…
ಬ್ಯಾಂಕ್‌ಗಳಲ್ಲಿ ಆರ್‌ಟಿಜಿಎಸ್ ಮೂಲಕ ಹಣ ಸಂದಾಯ ಮಾಡುವುದರಲ್ಲಿ ವ್ಯತ್ಯಯ ಬಿಟ್ಟರೆ ಬೇರೇನೂ ಸಮಸ್ಯೆಗಳು ಕಂಡುಬರಲಿಲ್ಲ. ಎಟಿಎಂಗಳಲ್ಲಿ ಸಾಕಷ್ಟು ಹಣವನ್ನು ಲೋಡ್ ಮಾಡಿರುವುದರಿಂದ ಗ್ರಾಹಕರಿಗೆ ಮುಷ್ಕರದ ಬಿಸಿ ತಟ್ಟಲಿಲ್ಲ. ನಗರ, ಸಬ್ ಅರ್ಬನ್ ಬಸ್ ನಿಲ್ದಾಣದಲ್ಲಿ ಬಸ್‌ಗಳು ಸಂಚಾರ ಎಂದಿನಂತೆ ಇದ್ದರೆ, ಸರ್ಕಾರಿ ಮತ್ತು ಖಾಸಗಿ ಶಾಲಾ-ಕಾಲೇಜುಗಳಲ್ಲಿ ಪಾಠವಪ್ರವಚನ ನಡೆಯಿತು.
ಕೃಷ್ಣರಾಜೇಂದ್ರ ಆಸ್ಪತ್ರೆಯಲ್ಲಿ ಹೊರ ರೋಗಿಗಳ ವಿಭಾಗದಲ್ಲಿ ವೈದ್ಯರು ರೋಗಿಗಳ ತಪಾಸಣೆ ಮಾಡಿದರೆ, ಅಂಚೆ ಕಚೇರಿ ಎಂದಿನಂತೆ ಕಾರ್ಯ ನಿರ್ವಹಿಸಿತು. ರೈಲ್ವೆ ನಿಲ್ದಾಣದಲ್ಲಿ ಎಂದಿನಂತೆ ರೈಲುಗಳು ಓಡಾಡಿದರೆ, ನಗರದ ಹೃದಯ ಭಾಗದ ಎಲ್ಲಾ ರಸ್ತೆಗಳಲ್ಲಿ ಜನಜಂಗುಳಿ, ವಾಹನಗಳ ಓಡಾಟ ಮಾಮೂಲಿಯಂತೆ ಇದ್ದರೆ, ಚಾಮರಾಜೇಂದ್ರ ಮೃಗಾಲಯ, ಅರಮನೆ ವೀಕ್ಷಿಸುವ ಕಾರ್ಯಕ್ಕೂ ಯಾವುದೇ ಅಡ್ಡಿಯಾಗಲಿಲ್ಲ.
ಒಟ್ಟಾರೆ ಯಾವುದೇ ಕಾನೂನುಭಂಗ ತರುವಂತಹ ಕೆಲಸ ನಡೆಯದೆ ಭಾರತ್ ಬಂದ್ ಪ್ರತಿಭಟನೆಗೆ ಸೀಮಿತವಾಗಿತ್ತು.







