Mysore
14
few clouds

Social Media

ಗುರುವಾರ, 25 ಡಿಸೆಂಬರ್ 2025
Light
Dark

ಶಾಲಾ-ಕಾಲೇಜು ಬಳಿ ತಂಬಾಕು ಮಾರಾಟ ಮಾಡದಂತೆ ಎಚ್ಚರವಹಿಸಿ: ಎಡಿಸಿ ಶಿವರಾಜು ಸೂಚನೆ

ಮೈಸೂರು : ಶಾಲಾ ಕಾಲೇಜುಗಳ 100 ಮೀಟರ್ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಬಳಕೆ ಹಾಗೂ ಮಾರಾಟ ನಿಷೇಧ ಮಾಡಲಾಗಿದ್ದು, ಈ ಬಗ್ಗೆ ಎಚ್ಚರವಹಿಸಬೇಕು.  ಕಾನೂನು ಉಲ್ಲಂಘಿಸಿದರೆ  ಅಂತವರ ಮೇಲೆ ಕಾನೂನು ರೀತ್ಯಾ ಕಠಿಣ ಕ್ರಮ ಜರುಗಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ. ಪಿ ಶಿವರಾಜು  ಸೂಚಿಸಿದರು.

ಇಂದು(ಜ.09) ಜಿಲ್ಲಾಧಿಕಾರಿ  ಸಭಾಂಗಣದಲ್ಲಿ ರಾಷ್ಟ್ರೀಯ ತಂಬಾಕು ನಿಯಂತ್ರಣ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ತಂಬಾಕು ಉತ್ಪನ್ನಗಳ ಸಾರ್ವಜನಿಕ ಬಳಕೆ ನಿಯಂತ್ರಣ ಕಾಯ್ದೆಯನ್ನು (ಕೋಟ್ಪಾ) ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಈ ನಿಟ್ಟಿನಲ್ಲಿ ಇಲಾಖೆ ಅಧಿಕಾರಿಗಳ ಜಂಟಿ ಕಾರ್ಯಾಚರಣೆ ನಡೆಸಬೇಕು ಎಂದರು.

ತಂಬಾಕು ಉತ್ಪನ್ನಗಳ ಮಾರಾಟ ಮಾಡಲು ಮಹಾನಗರ ಪಾಲಿಕೆ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪರವಾನಗಿ ಪಡೆದುಕೊಳ್ಳಬೇಕು. ಈ ಬಗ್ಗೆ ಹೊಸದಾಗಿ ಸರ್ಕಾರದ ಆದೇಶ ಆಗಿದೆ. ಈ ಸಂಬಂಧ ಸಂಬಂಧಿಸಿದ ಇಲಾಖೆಗಳು ಕ್ರಮವಹಿಸಬೇಕು. ಮೈಸೂರು ಜಿಲ್ಲೆಯಲ್ಲಿ ಹೆಚ್ಚು ತಂಬಾಕು ಬೆಳೆಯುವ ಜಿಲ್ಲೆಯಾಗಿದ್ದೂ ಪ್ರತಿ ವರ್ಷ ಶೇ. 5 ರಷ್ಟು ತಂಬಾಕು ಬೆಳೆ ಬೆಳೆಯುವುದನ್ನು ಕಡಿಮೆ ಮಾಡಬೇಕು. ತಂಬಾಕು ಬೆಳೆಗಾರರು ತೋಟಗಾರಿಕೆ ಬೆಳೆಗಳು, ಆಹಾರದ ಬೆಳೆಗಳು ಹಾಗೂ ಇತರೆ ವಾಣಿಜ್ಯ ಬೆಳೆಗಳನ್ನು ಬೆಳೆಯಲು ಉತ್ತೇಜನ ನೀಡಬೇಕು ಎಂದು ಹೇಳಿದರು.

ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಇರುವ ಸ್ಕ್ವಾಡ್ ಟೀಮ್ ಗಳು ಅನಿರೀಕ್ಷಿತವಾಗಿ ರೈಡ್ ಗಳನ್ನು ಮಾಡಿ ತಂಬಾಕು ಉತ್ಪನ್ನಗಳ ಮಾರಾಟದಲ್ಲಿ ನಿಯಮ ಉಲ್ಲಂಘನೆ ಆಗಿರುವ ಕುರಿತು ಪ್ರಕರಣಗಳನ್ನು ದಾಖಲಿಸಬೇಕು. ತಂಬಾಕು ಉತ್ಪನ್ನಗಳ ಬಳಕೆಯಿಂದ ಆಗುವ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಬೇಕು. ತಂಬಾಕು ಉತ್ಪನ್ನಗಳ ಬಳಕೆ ಕಡಿಮೆ ಆಗುವ ನಿಟ್ಟಿನಲ್ಲಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು ಎಂದರು.

ಯುವ ಸಮೂಹವು ಸಾರ್ವಜನಿಕ ಸ್ಥಳಗಳಲ್ಲಿ ಕಾಲೇಜು ಆವರಣಗಳಲ್ಲಿ ಬೀಡಿ ಸಿಗರೇಟು ಸೇವನೆ ಮಾಡುವುದನ್ನು ನಿಲ್ಲಿಸಬೇಕು. ಉಲ್ಲಂಘನೆ ಮಾಡಿದರೆ ಪೊಲೀಸ್ ಇಲಾಖೆ ದಂಡ ವಿಧಿಸಬೇಕು. ಶೈಕ್ಷಣಿಕ ಸಂಸ್ಥೆಗಳಲ್ಲಿ ಕೋಟ್ಪಾ ಕಾಯ್ದೆ ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಶಾಲೆ, ಕಾಲೇಜುಗಳನ್ನು ತಂಬಾಕು ಮುಕ್ತ ವಲಯಗಳನ್ನಾಗಿ ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಶಾಲಾ, ಕಾಲೇಜುಗಳ ಬಳಿ ತಂಬಾಕು ಮಾರಾಟ ಮಾಡುವುದು ಕಟ್ಟುನಿಟ್ಟಾಗಿ ನಿರ್ಬಂಧಿಸಬೇಕು ಎಂದು ತಿಳಿಸಿದರು.

ಜಿಲ್ಲೆಯ ಎಲ್ಲಾ ಪ್ರವಾಸಿ ತಾಣಗಳಲ್ಲಿ, ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ, ಟೀ ಸ್ಟಾಲ್, ಕಾಂಡಿಮೆಂಟ್‌ಗಳಲ್ಲಿ, ಸರ್ಕಾರಿ ಕಚೇರಿಗಳಲ್ಲಿ ತಂಬಾಕು ಮುಕ್ತ ವಲಯ ನಾಮಫಲಕಗಳನ್ನು ಅಳವಡಿಸಿಕೊಳ್ಳುವ ಜತೆಗೆ ಬಿಡಿ ಬಿಡಿಯಾಗಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡದಂತೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು. ಮಹಾನಗರ ಪಾಲಿಕೆ, ನಗರಸಭೆ ಹಾಗೂ ಪುರಸಭೆ ವ್ಯಾಪಾರದ ಪರವಾನಗಿ ನೀಡುವಾಗ ಕೋಟ್ಪಾ ಕಾಯ್ದೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.

ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುತ್ತಿದ್ದ 2123 ಪ್ರಕರಣ ದಾಖಲಿಸಿ 2,39,220 ದಂಡವನ್ನು ವಿಧಿಸಲಾಗಿದ್ದು ದಾಖಲಿಸಿರುವ ಪ್ರಕರಣಗಳು ತುಂಬಾ ಕಡಿಮೆ. ಹೆಚ್ಚಿನ ನಿಯಮ ಉಲ್ಲಂಘನೆ ಆಗುತ್ತಿದ್ದು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಸವಿತಾ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಸರ್ವೇಕ್ಷಣಾಧಿಕಾರಿ ನಾಗರಾಜು, ಜಿಲ್ಲಾ ಸಮಾಲೋಚಕರಾದ ಶಿವಕುಮಾರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಟಿ ಕೆ ಹರೀಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Tags:
error: Content is protected !!