ಮೈಸೂರು : ಗುರುವಾರ ರಾತ್ರಿ ನಗರದ ರಾಮಾನುಜ ರಸ್ತೆಯಲ್ಲಿ ನಡೆದ ಹಲ್ಲೆ ಪ್ರಕರಣ ಹಳೆಯ ದ್ವೇಷಕ್ಕಾಗಿ ನಡೆದಿದೆ ಎಂದು ಕೃಷ್ಣರಾಜ ಠಾಣೆ ಪೊಲೀಸರು ತಿಳಿಸಿದ್ದು, ಮಾರಕಾಸ್ತ್ರಗಳಿಂದ ಮೂವರ ಮೇಲೆ ಹಲ್ಲೆ ನಡೆಸಿರುವ ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಬಾಲಕಿಯನ್ನು ಪ್ರೀತಿಯ ನೆಪದಲ್ಲಿ ಕರೆದೊಯ್ದಿದ್ದ ಸ್ನೇಹಿತನನ್ನು ಹೇಗಾದರೂ ಮಾಡಿ ಕೊಲೆ ಮಾಡಬೇಕು ಎಂಬ ದುರುದ್ದೇಶದಿಂದ ಬಾಲಕಿಯ ಸಂಬಂಧಿಕರು ಎಸಗಿರುವ ದುಷ್ಕೃತ್ಯ.
ವಿಶೇಷವೆಂದರೆ ಇದು ಸ್ನೇಹಿತರ ನಡುವೆ ನಡೆದಿರುವ ಕಲಹ. ತಾಲ್ಲೂಕಿನ ಮೆಲ್ಲಹಳ್ಳಿ ಗ್ರಾಮದ ನಿವಾಸಿ ರಾಮಣ್ಣ ಹಾಗೂ ನಗರದ ಕೈಲಾಸಪುರಂ ನಿವಾಸಿ ರಾಜಣ್ಣ ಎಂಬವರ ನಡುವೆ ಇದ್ದ ದ್ವೇಷವೇ ಘಟನೆಗೆ ಕಾರಣವಾಗಿದೆ.
ರಾಮಣ್ಣ ಹಾಗೂ ರಾಜಣ್ಣ ಸ್ನೇಹಿತರು. ಇಬ್ಬರೂ ವಿವಾಹಿತರು. ರಾಮಣ್ಣ ಅವರಿಗೆ ಓರ್ವ ಮಗಳಿದ್ದಾಳೆ. ರಾಮಣ್ಣ ಅವರ ಮನೆಗೆ ಹೋಗಿಬಂದು ಮಾಡುತ್ತಿದ್ದ ರಾಜಣ್ಣನ ದೃಷ್ಟಿ ಆಕೆಯ ಮೇಲೆ ಬಿದ್ದಿದೆ. ಆತ ಆಕೆಯ ಮೇಲೆ ದೃಷ್ಟಿ ಇಟ್ಟಿದ್ದ ವೇಳೆ ಆಕೆಗೆ 16 ವರ್ಷ ವಯಸ್ಸು.
ಪ್ರೀತಿಯ ನಾಟಕವಾಡಿದ್ದ ಆತ ಬಾಲಕಿಯನ್ನು ಪುಸಲಾಯಿಸಿ ಕರೆದೊಯ್ದಿದ್ದ. ಈ ಸಂಬಂಧ ವಿದ್ಯಾರಣ್ಯಪುರಂ ಠಾಣೆಯಲ್ಲಿ ಬಾಲಕಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ನಂತರ ರಾಜಣ್ಣ ಹಾಗೂ ಬಾಲಕಿಯನ್ನು ಕರೆತಂದಿದ್ದ ಪೊಲಿಸರು ಆತನ ವಿರುದ್ಧ ಪೋಕ್ಸೊ ಪ್ರಕರಣ ದಾಖಲಿಸಿ ಜೈಲಿಗಟ್ಟಿದ್ದರು.
ಆತ ಜಾಮೀನಿನ ಮೇಲೆ ಹೊರ ಬಂದ ನಂತರ ಮತ್ತೆ ರಾಮಣ್ಣನ ಮಗಳು ಕಾಣೆಯಾಗಿದ್ದಳು. ಪೋಕ್ಸೊ ಪ್ರಕರಣದ ವಿಚಾರಣೆಗೆಂದು ಆಕೆ ಗುರುವಾರ ನೇರ ನ್ಯಾಯಾಲಯಕ್ಕೆ ಬಂದಿದ್ದಳು.
ನಂತರ ರಾಜಣ್ಣ ಹಾಗೂ ರಾಮಣ್ಣ ಅವರ ಕುಟುಂಬಸ್ಥರನ್ನು ಕರೆಸಿದ್ದ ವಿದ್ಯಾರಣ್ಯಪುರಂ ಠಾಣಾ ಪೊಲೀಸರು, ಬಾಲಕಿಯ ತಂಟೆಗೆ ಬಾರದಂತೆ ರಾಜಣ್ಣನಿಗೆ ಎಚ್ಚರಿಕೆ ನೀಡಿ ಕಳುಹಿಸಿ ಕೊಟ್ಟಿದ್ದರು. ಆದರೆ, ಬಾಲಕಿಯ ಸೋದರ ಸಂಬಂಧಿಗಳು ರಾಜಣ್ಣನ ವಿರುದ್ಧ ಪ್ರತೀಕಾರಕ್ಕೆ ತೀರ್ಮಾನಿಸಿದ್ದರು.
ಪೊಲೀಸ್ ಠಾಣೆಯಿಂದ ಆಟೋದಲ್ಲಿ ರಾಜಣ್ಣ, ಆತನ ತಾಯಿ ರೇಣುಕಾ, ಸಹೋದರಿ ವಿಶಾಲಾಕ್ಷಿ ಹಾಗೂ ಪತ್ನಿ ಕುಮುದ ಅವರು ಮನೆಗೆ ತೆರಳುತ್ತಿದ್ದರು. ಈ ವೇಳೆ ಕಾರಿನಲ್ಲಿ ಹಿಂಬಾಲಿಸಿದ ಅಭಯ್, ವಿನೋದ್, ಗೌತಮ್, ಸೌಮ್ಯ, ರಾಮಣ್ಣ ಹಾಗೂ ಕಿಚ್ಚ ಪ್ರಸಾದ್ ಅವರು ರಾಮಾನುಜ ರಸ್ತೆಯಲ್ಲಿ ಆಟೋವನ್ನು ಅಡ್ಡಗಟ್ಟಿ, ಆಟೋದಲ್ಲಿದ್ದ ಕುಮುದ, ವಿಶಾಲಾಕ್ಷಿ ಹಾಗೂ ರಾಜಣ್ಣ ಅವರ ಮೇಲೆ ಮಚ್ಚು ಸೇರಿದಂತೆ ಮಾರಕಾಸ್ತ್ರಗಳಿಂದ ಮನಸೋ ಇಚ್ಚೆ ಹಲ್ಲೆ ನಡೆಸಿ, ನಿನ್ನನ್ನು ಬಿಡುವುದಿಲ್ಲ ಎಂದು ಎಚ್ಚರಿಸುತ್ತಲೇ ಕಾರಿನಲ್ಲಿ ಪರಾರಿಯಾಗಿದ್ದಾರೆ.
ವಿಚಾರ ತಿಳಿದು ಸ್ಥಳಕ್ಕೆ ಬಂದ ಪೊಲೀಸರಿಗೆ ಮೊದಲು ಏನು ನಡೆದಿದೆ ಎಂಬುದರ ಅರಿವಿಲ್ಲ. ನಂತರ ಸಿಸಿಟಿವಿ ದೃಶ್ಯಾವಳಿ ಹಾಗೂ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ.
ದುಷ್ಕರ್ಮಿಗಳ ದಾಳಿಯಿಂದ ಕುಮುದ ಅವರ ನಾಲ್ಕು ಬೆರಳುಗಳು ಕತ್ತರಿಸಿ ಹೋಗಿದ್ದರೆ, ವಿಶಾಲಾಕ್ಷಿ ಅವರ ಬಲಗೈಗೆ ಗಂಭೀರ ಪೆಟ್ಟಾಗಿದ್ದರೆ, ರಾಜಣ್ಣ ಅವರ ಕುತ್ತಿಗೆ, ಕೈಗೆ ಮಚ್ಚಿನೇಟು ಬಿದ್ದಿದೆ. ಗಾಯಾಳುಗಳು ಕೆ.ಆರ್. ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ದಾಖಲಾಗಿ ಚಿಕಿತ್ಸೆ ಪಡೆದ ಬಳಿಕ ಸ್ವಇಚ್ಚೆ ಮೇರೆಗೆ ಶುಕ್ರವಾರ ಬೆಳಿಗ್ಗೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆಯ ಮಾಹಿತಿ ಪಡೆದಿರುವ ಪೊಲೀಸರು, ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ.





