ಮೈಸೂರು : ಕುಟುಂಬದ ಒಬ್ಬ ಸದಸ್ಯನಾದರೂ ಸೇನೆಗೆ ಸೇರಿ ದೇಶಸೇವೆ ಮಾಡಬೇಕು ಎಂದು ನಿವೃತ್ತ ಸೈನಿಕ ಅಂಥೋಣಿ ಜಾರ್ಜ್ ಕರೆ ನೀಡಿದರು.
ಕೇಂದ್ರ ಸಂವಹನ ಇಲಾಖೆ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಮೈಸೂರು ಹಾಗೂ ಎನ್ ಆರ್ ಮೊಹಲ್ಲಾದ ಸೇಂಟ್ ಆನ್ಸ್ ಶಾಲೆಯ ಸಹಯೋಗದೊಂದಿಗೆ ಆಯೋಜಿಸಿದ್ದ 78 ನೇ ಸ್ವಾತಂತ್ರ್ಯ ದಿನಾಚರಣೆ ವಿಶೇಷ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸೇನೆ ಎಂದರೆ ಸೈನಿಕ ಮಾತ್ರ ಅಲ್ಲ ಹಲವು ವಿಭಾಗಗಳಲ್ಲಿ ಉನ್ನತ ಹುದ್ದೆ ಅಲಂಕರಿಸಬಹುದು ಎಂದರು. ಈ ಸಂದರ್ಭದಲ್ಲಿ ಸೇನೆಯಲ್ಲಿ 22 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಮಾಜಿ ಸೈನಿಕ ಅಂಥೋಣಿ ಜಾರ್ಜ್ ಅವರನ್ನು ಗೌರವಿಸಲಾಯಿತು.
ಪ್ರಾಸ್ತವಿಕವಾಗಿ ಮಾತನಾಡಿದ ಕ್ಷೇತ್ರ ಪ್ರಚಾರಾಧಿಕಾರಿ ಶ್ರುತಿ ಎಸ್ ಟಿ ದೇಶಭಕ್ತಿಯನ್ನು ಹೆಚ್ಚಿಸುವ ಇಂತಹ ವಿವಿಧ ಕಾರ್ಯಕ್ರಮಗಳಿಗೆ ಕೇಂದ್ರ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ ಎಂದು ಹೇಳಿದರು. ಭಾರತ ಸೇವಾದಳದ ಸಂಪನ್ಮೂಲ ವ್ಯಕ್ತಿ ಶೇಷಾಚಲ ಮಾತನಾಡಿ ರಾಷ್ಟ್ರಧ್ವಜದ ಮಹತ್ವ ಸಾರಿದರು.
ಸೇಂಟ್ ಆನ್ಸ್ ಶಾಲೆಯ ವ್ಯವಸ್ಥಾಪಕರಾದ ಸಿಸ್ಟರ್ ಆನೆಟ್, ಪ್ರಾಂಶುಪಾಲರಾದ ಸಿಸ್ಟರ್ ಲಿಲ್ಲಿ ಪೀಟರ್, ಸಿಸ್ಟರ್ ಹೆಲೆನ ಜೋಸೆಫ್, ಸಿಸ್ಟರ್ ಮ್ಯಾರಿಯಟ್ ಉಪಸ್ಥಿತರಿದ್ದರು. ಏಕ ಭಾರತ ಶ್ರೇಷ್ಠ ಭಾರತ ಛದ್ಮವೇಶ ಸ್ಪರ್ಧೆ, ಸ್ವಾತಂತ್ರ್ಯ ದಿನ ಕುರಿತು ಚಿತ್ರಕಲೆ ಹಾಗೂ ಭಾಷಣ ಸ್ಪರ್ಧೆಗಳು ನಡೆದು ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಅರುಣೋದಯ ಜಾನಪದ ಕಲಾತಂಡ ಹಾಗೂ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕ್ಷೇತ್ರ ಪ್ರಚಾರ ಸಹಾಯಕ ದರ್ಶನ್, ಶಾಲಾ ಶಿಕ್ಷಕರು, ಪೋಷಕರು ಉಪಸ್ಥಿತರಿದ್ದರು