ಮೈಸೂರು: ನಂಜನಗೂಡಿನಲ್ಲಿ ಹಸುವಿನ ಬಾಲ ಕಟ್ಟು ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯೆ ನೀಡಿದ್ದು, ಗೋಭಕ್ಷಕರಿಂದಲೇ ಈ ಘಟನೆ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ಮೈಸೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಹಿಂದುಗಳು ತಾಯಿ ಎಂದು ಪೂಜಿಸುವ ಗೋಮಾತೆಯ ಕೆಚ್ಚಲು ಕೊಯ್ದ ಘಟನೆ ನಡೆದಿತ್ತು. ಈ ಪ್ರಕರಣ ಮಾಸುವ ಮುನ್ನವೇ ನಂಜನಗೂಡಿನಲ್ಲಿ ಗೋಮಾತೆಯ ಬಾಲ ಕಟ್ಟು ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನು ನಾವು ಸಂಪೂರ್ಣವಾಗಿ ವಿರೋಧ ಮಾಡುತ್ತೇವೆ. ನಮ್ಮ ಮನಸ್ಸಿಗೆ ಆಗಿರುವ ನೋವನ್ನು ಪೂಜೆ ಮಾಡುವ ಮೂಲಕ ಹೊರ ಹಾಕಿದ್ದೇವೆ. ಸಿದ್ದರಾಮಯ್ಯರ ಆಡಳಿತ ಇದೇ ರೀತಿ ಮುಂದುವರಿದರೆ ಹಿಂದುಗಳ ನಂಬಿಕೆಗೆ ಧಕ್ಕೆ ಆಗುತ್ತದೆ. ಸಿದ್ದರಾಮಯ್ಯನವರ ಅವಧಿಯಲ್ಲಿ ಮುಸ್ಲಿಂ ಓಲೈಕೆ ಮಿತಿ ಮೀರಿದೆ. ಒಂದು ವೇಳೆ ಸಿದ್ದರಾಮಯ್ಯ ಸಿಎಂ ಸ್ಥಾನದಿಂದ ಇಳಿದರೆ ಕಾಂಗ್ರೆಸ್ ಇಬ್ಭಾಗ ಆಗುತ್ತೆ ಎಂದು ಭವಿಷ್ಯ ನುಡಿದರು.
ಇನ್ನು ಮುಂದುವರಿದು ಮಾತನಾಡಿದ ಅವರು, ಹಸುವಿನ ಕೆಚ್ಚಲು ಕೊಯ್ದ ಆರೋಪಿಗಳ ವಿರುದ್ಧ ತನಿಖೆ ಆಗ್ಬೇಕು. ಕಠಿಣ ಶಿಕ್ಷೆ ಆಗಬೇಕು. ಹಸುವಿನ ಕೆಚ್ಚಲು ಕುಯ್ಯುವ ರೀತಿಯೇ ಆತನಿಗೂ ಶಿಕ್ಷೆ ಆಗಲಿ. ಈ ಕೂಡಲೇ ಆತನನ್ನು ಜೈಲಿಗೆ ಹಾಕಬೇಕು ಎಂದು ಆಗ್ರಹಿಸಿದರು.