ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಸಂಸದ ಪ್ರತಾಪ್ ಸಿಂಹರಿಗೆ ಟಿಕೆಟ್ ನಿರಾಕರಣೆ ಮಾಡಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾದ ಬೆನ್ನಲ್ಲೇ ಈ ಕುರಿತು ಮಾಜಿ ಡಿಸಿಎಂ ಡಾ. ಅಶ್ವಥ್ ನಾರಾಯಣ್ ಸ್ಪಷ್ಟನೆ ನೀಡಿದ್ದಾರೆ.
ರಾಜಕೀಯದಲ್ಲಿ ಯಾವುದು ನಿಶ್ಚಿತವಾಗಿ ಗೊತ್ತಿಲ್ಲ. ಪಕ್ಷದ ಪಾರ್ಲಿಮೆಂಟರಿ ಬೋರ್ಡ್‌ನಲ್ಲಿ ನಿರ್ಧರಿಸುವವರೆಗೆ ಎಲ್ಲರೂ ಕಾಯಬೇಕಾಗುತ್ತದೆ. ಪೊಲಿಟಿಕ್ಸ್ ತುಂಬಾ ಡೈನಾಮಿಕ್ ಆಗಿದ್ದು, ಸದ್ಯಕ್ಕೆ ನಾನು ಈ ಬಗ್ಗೆ ಮಾತನಾಡುವುದಿಲ್ಲ ಎಂದು ಅಶ್ವಥ್ ನಾರಾಯಣ್ ಹೇಳಿದ್ದಾರೆ.
ರಾಜಕೀಯದಲ್ಲಿ ಹೊಸ ಮುಖಕ್ಕೆ ಮಣೆ ಹಾಕುವುದು ಪಕ್ಷದಲ್ಲಿ ಸಾಮಾನ್ಯ. ಹೊಸ ಚಿಗುರು, ಹಳೆ ಬೇರು ಎಂಬುದು ನಡೆಯುತ್ತಲೇ ಇರುತ್ತದೆ. ರಾಜಕೀಯದಲ್ಲಿ ಇದೇ ನಿಶ್ಚಿತ ಎಂದು ಹೇಳಲು ಸಾಧ್ಯವಿಲ್ಲ. ಎಲ್ಲರನ್ನೂ ಉಳಿಸಿಕೊಂಡು, ಬೆಳೆಸಿಕೊಂಡು ಹೋಗಬೇಕು ಎಂದರು.
ಜೊತಗೆ ಜಯದೇವ ಹೃದ್ರೋಗ ಸಂಸ್ಥೆ ನಿವೃತ್ತ ನಿರ್ದೇಶಕ ಡಾ. ಸಿ.ಎನ್.ಮಂಜುನಾಥ್ ಅವರ ರಾಜಕೀಯ ಪ್ರವೇಶದ ಬಗ್ಗೆ ಪ್ರತಿಕ್ರಿಯಿಸಿದ ಡಾ. ಅಶ್ವಥ್ ನಾರಾಯಣ್, ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸುವಂತೆ ಅವರಿಗೆ ಆಹ್ವಾನ ನೀಡಿದ್ದೇವೆ. ಅದರಲ್ಲಿ ಎರಡೂ ಮಾತಿಲ್ಲ. ಆದರೂ ದೊಡ್ಡವರ ಮಟ್ಟದಲ್ಲಿ ಏನು ನಿರ್ಧರಿಸುತ್ತಾರೆ ನನಗೆ ಗೊತ್ತಿಲ್ಲ. ರಾಜಕೀಯದಲ್ಲಿ ಯಾರಿಗೂ ಬಾಗಿಲು ಮುಚ್ಚುವುದಿಲ್ಲ ಎಂದು ಇದೇ ವೇಳೆ ಮಾಜಿ ಡಿಸಿಎಂ ಹೇಳಿದ್ದಾರೆ.