ಮೈಸೂರು : ಆಷಾಢಮಾಸದ ಮೂರನೇ ಶುಕ್ರವಾರದ ಹಿನ್ನೆಲೆಯಲ್ಲಿ ಚಾಮುಂಡಿಬೆಟ್ಟಕ್ಕೆ ಸಾವಿರಾರು ಮಂದಿ ಭೇಟಿ ನೀಡಿ ಚಾಮುಂಡೇಶ್ವರಿದೇವಿಯ ದರ್ಶನ ಪಡೆದು ಪುನೀತರಾದರು.
ಮಳೆಯಂತೆ ಸುರಿಯುತ್ತಿದ್ದ ಮಂಜನ್ನೂ ಲೆಕ್ಕಿಸದೆ ಮುಂಜಾನೆಯಿಂದಲೇ ರಾಜ್ಯದ ವಿವಿಧ ಭಾಗಗಳಿಂದ ಬೆಟ್ಟದತ್ತ ಧಾವಿಸಿ ಬಂದ ಭಕ್ತರು ಸರತಿ ಸಾಲಿನಲ್ಲಿ ನಿಂತು ಚಾಮುಂಡೇಶ್ವರಿ ದರ್ಶನ ಪಡೆದು ಧನ್ಯರಾದರು. ಕೆಲವರು ಮೆಟ್ಟಿಲುಗಳ ಮೂಲಕ ಬಂದರೆ ಇನ್ನು ಕೆಲವರು ಸಾರಿಗೆ ಬಸ್‌ನಲ್ಲಿ ಬೆಟ್ಟಕ್ಕೆ ಆಗಮಿಸಿದರು. ಉಚಿತ ಪ್ರವೇಶ, 300 ರೂ, 2000 ರೂ. ಸರತಿ ಸಾಲಿನಲ್ಲಿ ನಿಂತು ಸಾವದಾನವಾಗಿ ದೇವಸ್ಥಾನಕ್ಕೆ ತೆರಳಿ ದೇವಿಯ ದರ್ಶನ ಪಡೆದರು. ಸರತಿ ಸಾಲಿನುದ್ದಕ್ಕೂ ಚಾಮುಂಡೇಶ್ವರಿಯ ಜಯಘೋಷಗಳು ಮೊಳಗಿದವು.
ಚಾಮುಂಡಿಬೆಟ್ಟಕ್ಕೆ ಉಚಿತ ಬಸ್‌ಗಳಲ್ಲಿ ಮಾತ್ರವಲ್ಲ, ಮೆಟ್ಟಿಲು ಮಾರ್ಗವಾಗಿ ಬರುವ ಭಕ್ತರ ಸಂಖ್ಯೆಯೂ ಅಧಿಕವಾಗಿತ್ತು. ಯುವತಿಯರು, ಗೃಹಿಣಿಯರು 1001 ಮೆಟ್ಟಿಲುಗಳಿಗೂ ಕುಂಕುಮ, ಅರಿಶಿಣ ಹಚ್ಚುತ್ತ ಮೆಟ್ಟಿಲು ಹತ್ತಿದರು. ಕೆಲವರು ಮಂಡಿಯಲ್ಲೇ ಮೆಟ್ಟಿಲುಗಳನ್ನು ಹತ್ತುವ ದೃಶ್ಯ ಭಕ್ತಿಭಾವದ ರೂಪಕದಂತಿತ್ತು.
ವಿಶೇಷ ಪೂಜೆ: ಮುಂಜಾನೆ ಮೂರು ಗಂಟೆಯಿಂದಲೇ ದೇವಸ್ಥಾನದಲ್ಲಿ ಪೂಜಾ ಕೈಂಕರ್ಯಗಳು ಆರಂಭವಾದವು. ಮೊದಲು ಚಾಮುಂಡೇಶ್ವರಿ ವಿಗ್ರಹವನ್ನು ಶುದ್ಧಗೊಳಿಸಿ, ಬಳಿಕ ವಿಶೇಷವಾಗಿ ಅಲಂಕಾರ ಮಾಡಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ದೇವಾಲಯದ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ನೇತೃತ್ವದಲ್ಲಿ ರುದ್ರಾಭಿಷೇಕ, ಪಂಚಾಮೃತಾಭಿಷೇಕ, ಕುಂಕುಮಾರ್ಚನೆ, ಏಕದಶ ಪುಷ್ಪಾರ್ಚನೆ, ಸಹಸ್ರನಾಮಾರ್ಚನೆ ಸೇರಿ ವಿವಿಧ ಪೂಜೆಗಳನ್ನು ನೆರವೇರಿಸಲಾಯಿತು. ಬಳಿಕ 5.30 ರಿಂದ ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. ಈ ಮಧ್ಯೆ ಬೆಳಿಗ್ಗೆ 9.30ಕ್ಕೆ ಮಹಾಮಂಗಳಾರತಿ, ಸಂಜೆ 6.30ರಿಂದ 7ರವರೆಗೆ ಅಭಿಷೇಕ ನೆರವೇರಿಸಲಾಯಿತು. ರಾತ್ರಿ 10 ಗಂಟೆವರೆಗೂ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ದರ್ಶನದ ವೇಳೆ ಯಾವುದೇ ನೂಕು ನುಗ್ಗಲಿಗೆ ಅವಕಾಶವಾಗದಂತೆ ಸೂಕ್ತ ವ್ಯವಸ್ಥೆ ಮಾಡಲಾಗಿತ್ತು.
ವಿಶೇಷ ಗಜಲಕ್ಷ್ಮಿ ಅಲಂಕಾರ: ಎಂದಿನಂತೆ ಮೂರನೇ ಆಷಾಢ ಶುಕ್ರವಾರವೂ ದೇವಾಲಯದ ಆವರಣವನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಚಾಮುಂಡೇಶ್ವರಿ ಬಿಳಿ, ನೇರಳೆ ಬಣ್ಣದ ಸೀರೆಯುಟ್ಟು ವಿಶೇಷ ಗಜಲಕ್ಷ್ಮಿ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದಳು. ದೇವಾಲಯದ ಇಡೀ ಆವರಣ ವಿಶೇಷ ಹೂವಿನ ಅಲಂಕಾರದಿಂದ ಆಕರ್ಷಕವಾಗಿತ್ತು. ಪ್ರವೇಶ ದ್ವಾರದಿಂದ ದೇವಸ್ಥಾನದ ಗರ್ಭಗುಡಿವರೆಗೆ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು. ಆರ್ಕಿಡ್ ಹೂ, ಗುಲಾಬಿ, ಸೇವಂತಿಗೆ, ಚೆಂಡು ಹೂ ಸೇರಿದಂತೆ ನಾನಾ ಬಗೆಯ ಹೂಗಳಿಂದ ದೇವಸ್ಥಾನದ ಆವರಣ ಕಂಗೊಳಿಸುತ್ತಿತ್ತು. ಸಾರ್ವಜನಿಕರು ತಮ್ಮ ಮೊಬೈಲ್‌ಗಳಲ್ಲಿ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದರು.
ಪ್ರಸಾದ ವಿತರಣೆ
ಬೆಟ್ಟಕ್ಕೆ ಆಗಮಿಸಿದ ಭಕ್ತರಿಗೆ ಇಲಾಖೆಯ ಜಾಗದಲ್ಲಿ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಉಪ್ಪಿಟ್ಟು, ಕೇಸರಿಬಾತ್, ಬಾತ್, ವಿತರಿಸಲಾಯಿತು.





