ನಂಜನಗೂಡು: ತಾಲ್ಲೂಕಿನ ಅಳಗಂಚಿ ಗ್ರಾಮದಲ್ಲಿ ಕಳೆದ ಕೆಲ ದಿನಗಳಿಂದ ಉಪಟಳ ನೀಡುತ್ತಿದ್ದ ಚಿರತೆಯೊಂದು ಸೆರೆಯಾಗಿದ್ದು, ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಅಳಗಂಚಿ ಗ್ರಾಮದಲ್ಲಿ ಕಳೆದ ಕೆಲ ದಿನಗಳಿಂದ ಚಿರತೆ ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸಿ ತಿಂದು ಹಾಕುತ್ತಿತ್ತು. ಚಿರತೆ ದಾಳಿಯಿಂದ ಭಯಭೀತರಾಗಿದ್ದ ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ಚಿರತೆ ಸೆರೆ ಹಿಡಿಯುವಂತೆ ಮನವಿ ಮಾಡಿದ್ದರು.
ಇದನ್ನು ಓದಿ: ಮೈಸೂರು ಜಿಲ್ಲೆಯಲ್ಲಿ ಮುಂದುವರಿದ ಹುಲಿ ದಾಳಿ ಪ್ರಕರಣಗಳು: ಕಂಗಾಲಾದ ರೈತರು
ಈ ಹಿನ್ನೆಲೆಯಲ್ಲಿ ಗುರುಮಲ್ಲೇಶ್ವರ ಸ್ವಾಮಿ ಗದ್ದುಗೆ ಬಳಿ ಅರಣ್ಯಾಧಿಕಾರಿಗಳು ಬೋನು ಅಳವಡಿಸಿದ್ದರು. ಸುಮಾರು ಮೂರರಿಂದ ನಾಲ್ಕು ವರ್ಷದ ಗಂಡು ಚಿರತೆಯೊಂದು ಬೋನಿಗೆ ಬಿದ್ದಿದ್ದು, ಗ್ರಾಮಸ್ಥರು ನಿರಾಳರಾಗಿದ್ದಾರೆ.
ಬೋನಿಗೆ ಬಿದ್ದ ಚಿರತೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸುರಕ್ಷಿತ ಸ್ಥಳಕ್ಕೆ ರವಾನೆ ಮಾಡಿದ್ದಾರೆ.





