Mysore
20
overcast clouds
Light
Dark

ಶಿಲ್ಪಿ ಅರುಣ್‌ ಯೋಗಿರಾಜ್‌ ಕಿರೀಟಕ್ಕೆ ಮತ್ತೊಂದು ಗರಿ; ಅಮರನಾಥಗೆ ನಂದಿ ಕೆತ್ತನೆ

ಮೈಸೂರು: ಅಯೋಧ್ಯೆಯ ಶ್ರೀರಾಮ್‌ ಲಲ್ಲಾ, ಕೇದರನಾಥದ ಶಂಕರಾಚಾರ್ಯರ ಪ್ರತಿಮೆ ಕೆತ್ತಿ ಖ್ಯಾತಿ ಪಡೆದಿದ್ದ ಮೈಸೂರಿನ ಶಿಲ್ಪಿ ಅರುಣ್‌ ಯೋಗಿರಾಜ್‌ ಅವರ ಕೈಯಲ್ಲಿ ಮತ್ತೊಂದು ಕಲಾಕೃತಿ ಮೂಡಿಬಂದಿದೆ.

ಶಿಲ್ಪಿ ಅರುಣ್‌ ಯೋಗಿರಾಜ್‌ ಅವರು ಕಾಶ್ಮೀರದ ಅಮರನಾಥ ದೇವಾಲಯಕ್ಕೆ ನಂದಿ ವಿಗ್ರಹ ಕೆತ್ತಿ ಮತ್ತೊಂದು ದಾಖಲೆ ಬರೆದಿದ್ದಾರೆ. ಅಮರನಾಥ ದೇಗುಲದ ಎದುರಿಗೆ ನಂದಿ ವಿಗ್ರಹ ಪ್ರತಿಷ್ಠಾಪನೆ ಮಾಡಲು ಮೈಸೂರು ಶೈಲಿಯಲ್ಲಿ ಈ ನಂದಿ ವಿಗ್ರಹವನ್ನು ಕೆತ್ತಲಾಗಿದೆ.

ಈ ನಂದಿ ವಿಗ್ರಹ ಮೂರು ಅಡಿ ಎತ್ತರವಿದ್ದು, ಕೃಷ್ಣ ಶಿಲೆಯಲ್ಲಿ ಈ ವಿಗ್ರಹ ಕೆತ್ತಲಾಗಿದೆ. ನಂದಿಗೆ ಅಲಂಕಾರ, ಪ್ರಾಕಾರ, ಪ್ರಕೃತಿ ಬಳಕೆ ಮಾಡಲಾಗಿದೆ. ಈ ನಂದಿ ವಿಗ್ರಹವನ್ನು ಕಾಶ್ಮೀರದ ಅಮರನಾಥ ದೇವಾಲಯದ ಹಿಮದ ಉದ್ಭವ ಲಿಂಗದ ಮುಂದೆ ಪ್ರತಿಷ್ಠಾಪನೆ ಮಾಡಲಾಗುತ್ತದೆ.

ಅಮರನಾಥ ಹಿಂದೂಗಳ ಪವಿತ್ರಾ ಯಾತ್ರೆಗಳಲ್ಲಿ ಒಂದು. ಪ್ರತಿ ವರ್ಷ ಉದ್ಭವ ಲಿಂಗದ ದರ್ಶನಕ್ಕೆ ಕೋಟ್ಯಾಂತರ ಜನರು ಈ ದೇವಾಲಯಕ್ಕೆ ತೆರಳುತ್ತಾರೆ. ಇಂತಹ ಪವಿತ್ರ ಸ್ಥಳದಲ್ಲಿ ಮೈಸೂರು ಮೂಲದ ಶಿಲ್ಪಿಯೊಬ್ಬರು ಕೆತ್ತಿರುವ ಮೂರ್ತಿ ಪ್ರತಿಷ್ಠಾಪನೆ ಆಗುತ್ತಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ.

ಆಯೋಧ್ಯೆಯ ಶ್ರೀರಾಮ ಲಲ್ಲಾ ನಿರ್ಮಾಣಕ್ಕೆ ಬಳಸಲಾಗಿರುವ ಮೈಸೂರು ಮೂಲದ ಕೃಷ್ಣಶಿಲೆಯಲ್ಲೇ ಈ ನಂದಿ ವಿಗ್ರಹವನ್ನು ನಿರ್ಮಾಣ ಮಾಡಲಾಗಿದೆ. ಈ ಶಿಲೆ ಮಂಜಿಗೆ ಕರಗದ ಶಿಲೆಯಾಗಿದೆ. ಆಗಾಗಿ ಈ ಶಿಲೆಯನ್ನೇ ಬಳಸಲಾಗಿದೆ.

ಅರುಣ್‌ ಯೋಗಿರಾಜ್‌ ಅವರಿಗೆ ಕಾಶ್ಮೀರದ ಅಮರನಾಥ್‌ ಬೋರ್ಡ್‌ ವತಿಯಿಂದ ನಂದಿ ವಿಗ್ರಹದ ಕೆತ್ತೆನೆಗೆ ಎರಡು ತಿಂಗಳ ಹಿಂದೆ ಆಹ್ವಾನ ಬಂದಿತ್ತು. ಎರಡು ತಿಂಗಳ ನಿರಂತರ ಪರಿಶ್ರಮದಿಂದ ಈ ನಂದಿ ವಿಗ್ರಹದ ತಯಾರಿ ಕಾರ್ಯ ಪೂರ್ಣಗೊಂಡಿದ್ದು, ಅರುಣ್‌ ಯೋಗಿರಾಜ್‌ ಅವರು ಅಮರನಾಥ ಬೋರ್ಡ್‌ ಅವರಿಗೆ ವಿಗ್ರಹವನ್ನು ಕಳುಹಿಸಿಕೊಟ್ಟಿದ್ದಾರೆ.

ಇನ್ನೂ ಈ ವಿಗ್ರಹವನ್ನು ಜೂನ್‌ ಅಂತ್ಯದಲ್ಲಿ ಪ್ರತಷ್ಠಾಪನೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.