ಮೈಸೂರು : ದತ್ತು ಸ್ವೀಕಾರ ಸಮಾರಂಭದ ಸಂದರ್ಭದಿಂದಲೇ ನಮ್ಮ ಹಾಗೂ ಜಿ.ಟಿ.ದೇವೇಗೌಡ ಅವರ ಹೊಂದಾಣಿಕೆ ಇದ್ದೇ ಇದೆ ಎಂದು ಮೈಸೂರು-ಕೊಡಗು ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ಮೈತ್ರಿ ಪಕ್ಷಗಳಾದ ಬಿಜೆಪಿ-ಜೆಡಿಎಸ್ ಹೊಂದಾಣಿಕೆಯಿಂದ ಚುನಾವಣೆ ಎದುರಿಸುತ್ತಿರುವ ಬೆನ್ನಲ್ಲೆ ಜೆಡಿಎಸ್ ಹಾಗೂ ಬಿಜೆಪಿ ಪಕ್ಷದ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಮ್ಮನ್ನು ದತ್ತು ಪಡೆಯುವ ಕಾರ್ಯಕ್ರಮದ ಸಂದರ್ಭದಿಂದಲೇ ಜಿ.ಟಿ.ದೇವೇಗೌಡ ಅವರ ಹೊಂದಾಣಿಕೆ ನಮ್ಮೊಂದಿಗೆ ಇದ್ದೇ ಇದೆ ಎಂದು ತಿಳಿಸಿದರು.
ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲಿಕ್ಕೆ ಜಿ.ಟಿ.ದೇವೇಗೌಡ ಹಾಗೂ ಎಸ್.ಎ.ರಾಮದಾಸ್, ಅಶ್ವಥ್ ನಾರಾಯಣ್ ಸೇರಿದಂತೆ ಎಲ್ಲಾ ನಾಯಕರ ಬೆಂಬಲ ತುಂಬಾ ಮುಖ್ಯ. ವಿಶೇಷವಾಗಿ ಜಿ.ಟಿ.ದೇವೇಗೌಡರ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತಿರುವುದು ತುಂಬ ಶಕ್ತಿ ತಂದಿದೆ ಎಂದರು.
ಶ್ರೇಷ್ಠ ಭಾರತ ನಿರ್ಮಾಣಕ್ಕೆ ಈ ಮೈತ್ರಿ ಹಾಗೂ ಹೊಂದಾಣಿಕೆ ಅನುಕೂಲವಾಗುತ್ತದೆ ಎಂದು ನಾನು ನಂಬಿದ್ದೇನೆ ಎಂದು ತಿಳಿಸಿದರು.
ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ, ಮಾಜಿ ಉಪ ಮುಖ್ಯಮಂತ್ರಿ ಅಶ್ವಥ ನಾರಾಯಣ್, ಮಾಜಿ ಶಾಸಕ ಎಸ್.ಎ.ರಾಮದಾಸ್, ಚಾಮರಾಜನಗರ ಲೋಕಸಭಾ ಬಿಜೆಪಿ ಅಭ್ಯರ್ಥಿ ಬಾಲರಾಜ್ ಸೇರಿದಂತೆ ಮೈತ್ರಿ ಪಕ್ಷಗಳ ಬೆಂಬಲಿಗರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.