Mysore
24
light intensity drizzle

Social Media

ಗುರುವಾರ, 12 ಡಿಸೆಂಬರ್ 2024
Light
Dark

ಕೆಲಸದ ಅವಧಿ ಹೆಚ್ಚಳಕ್ಕೆ ಎಐಯುಟಿಯುಸಿ ವಿರೋಧ

ಮೈಸೂರು: ಕಾರ್ಖಾನೆಗಳ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಕಾರ್ಮಿಕರ ಕೆಲಸದ ಅವಧಿಯನ್ನು ಹೆಚ್ಚಳ ಮಾಡಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ‘ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ’ (AIUTUC) ಸದಸ್ಯರು ಗುರುವಾರ ಪ್ರತಿಭಟನೆ ನಡೆಸಿದರು.ಜಿಲ್ಲಾಧಿಕಾರಿ ಕಚೇರಿ ಸಮೀಪ ಜಮಾಯಿಸಿದ ಪ್ರತಿಭಟನಕಾರರು, ‘ಕಾಯ್ದೆ ತಿದ್ದುಪಡಿಯನ್ನು ಕೈ ಬಿಡಬೇಕು’ ಎಂದು ಆಗ್ರಹಿಸಿದರು.
ಎಐಯುಟಿಯುಸಿ ರಾಜ್ಯ ಸಮಿತಿ ಸದಸ್ಯೆ ಉಮಾದೇವಿ ಮಾತನಾಡಿ, ‘ದುಡಿಮೆ ಅವಧಿಯನ್ನು 9 ಗಂಟೆಯಿಂದ 12 ಗಂಟೆಗೆ ಏರಿಸಲಾಗಿದೆ. ರಾತ್ರಿ ವೇಳೆ ಮಹಿಳಾ ಕಾರ್ಮಿಕರಿಗೆ ಇದ್ದ ನಿರ್ಬಂಧ ತೆಗೆದುಹಾಕಲಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘12 ಗಂಟೆ ಕೆಲಸ ಮಾಡಿಸಿದರೆ ಕಾರ್ಮಿಕನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಹೆಚ್ಚುವರಿ ಕೆಲಸಕ್ಕೂ ಒ.ಟಿ ಭತ್ಯೆ ಕೂಡ ಇಲ್ಲ. ದಿನಕ್ಕೆ 7 ಗಂಟೆಯಂತೆ ವಾರಕ್ಕೆ 5 ದಿನ ಕೆಲಸ ಅವಧಿ ನಿಗದಿಗೊಳಿಸಬೇಕು’ ಎಂದು ಆಗ್ರಹಿಸಿದರು.

‘ದುಡಿಯುವ ಸ್ಥಳಗಳಲ್ಲಿ ಮಹಿಳಾ ಕಾರ್ಮಿಕರ ಮೇಲೆ ದೌರ್ಜನ್ಯ ನಡೆಯುತ್ತಿದೆ. ರಾತ್ರಿ ವೇಳೆ ಕೆಲಸದ ನಿರ್ಬಂಧ ತೆಗೆದುಹಾಕಿದರೆ ಶೋಷಣೆ ಇನ್ನಷ್ಟು ಹೆಚ್ಚಾಗಲಿದೆ. ಮಕ್ಕಳ ಲಾಲನೆ–ಪಾಲನೆ ಮಾಡುವ ಜವಾಬ್ದಾರಿ ನಿರ್ವಹಿಸುತ್ತಿರುವ ಮಹಿಳೆಯ ಮೇಲೆ ಹೆಚ್ಚುವರಿ ಹೊರೆ ಬೀಳಲಿದೆ. ಆರೋಗ್ಯದ ಮೇಲೂ ಪರಿಣಾಮ ಬೀರುವುದರಿಂದ ತಿದ್ದುಪಡಿ ಕೈಬಿಡಬೇಕು’ ಎಂದರು.

ಎಐಟಿಯುಸಿ ಮುಖಂಡ ‌ಎನ್‌.ಕೆ.ದೇವದಾಸ್‌ ಮಾತನಾಡಿ, ‘ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ 8 ಗಂಟೆ ಕೆಲಸ, 8 ಗಂಟೆ ವಿರಾಮ, 8 ಗಂಟೆ ಮನರಂಜನೆ ಆಶಯಕ್ಕೆ ಹೊಸ ನೀತಿಯು ವಿರುದ್ಧವಾಗಿದೆ. ಮಾನವ ವಿರೋಧಿ ಕಾಯ್ದೆ ವಾಪಸ್‌ ಪಡೆಯಬೇಕು’ ಎಂದು ಒತ್ತಾಯಿಸಿದರು.

‘ಯಾವುದೇ ಕಾಯ್ದೆ ತಿದ್ದುಪಡಿ ಮಾಡುವಾಗಲೂ ತಜ್ಞರ ಸಮಿತಿ ರಚಿಸಿ ಸಲಹೆ ಪಡೆಯಬೇಕು. ಕಾರ್ಮಿಕರಿಗೆ ಸಂಬಂಧಿಸಿದ ವಿಚಾರವಾಗಿದ್ದರೂ ಮುಖಂಡರ ಅಭಿಪ್ರಾಯ ಪಡೆಯದೇ ಏಕಾಏಕಿ ತಿದ್ದುಪಡಿ ಮಾಡುವ ಮೂಲಕ ಪ್ರಜಾಸತ್ತಾತ್ಮಕ ನೀತಿಗಳಿಗೆ ವಿರುದ್ಧವಾಗಿ ಸರ್ಕಾರ ನಡೆದುಕೊಂಡಿದೆ. ಬಂಡವಾಳಶಾಹಿಗಳ ಪರವಾಗಿ ಕೆಲಸ ಮಾಡಿದೆ’ ಎಂದು ಕಿಡಿಕಾರಿದರು.

ವಿವಿಧ ಸಂಘಟನೆಗಳ ಮುಖಂಡರಾದ ಬಾಲಾಜಿರಾವ್, ಎಚ್‌.ಆರ್‌.ಶೇಷಾದ್ರಿ, ಅನಿಲ್‌ಕುಮಾರ್‌ ನಾ.ದಿವಾಕರ್, ಜಯರಾಮ್‌, ಜಗನ್ನಾಥ್‌, ಜವರಯ್ಯ, ಅನಿಲ್‌ಕುಮಾರ್, ಮೆಹಬೂಬ್‌, ಲೋಕೇಶ್‌, ರಾಜು, ವೆಂಕಟೇಶ್ ಇದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ