Mysore
26
broken clouds

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

2030ರೊಳಗೆ ಎಚ್‌ಐವಿ ನಿರ್ಮೂಲನೆಗೆ ಗುರಿ : ಸಚಿವ ದಿನೇಶ್‌ ಗುಂಡೂರಾವ್‌

ಮೈಸೂರು : 2030ರೊಳಗೆ ರಾಜ್ಯದಲ್ಲಿ ಎಚ್‌ಐವಿ ಸೋಂಕು ನಿರ್ಮೂಲನೆ ಮಾಡಬೇಕೆಂದು ಸರ್ಕಾರ ಗುರಿ ಹೊಂದಿದ್ದು, ಈ ನಿಟ್ಟಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರ್ಯಪ್ರವೃತ್ತವಾಗಿದೆ ಎಂದು ಆರೋಗ್ಯ ಸಚಿವ ಡಾ.ದಿನೇಶ್ ಗುಂಡೂರಾವ್ ಹೇಳಿದರು.

ನಗರದ ಜೆ.ಕೆ.ಮೈದಾನದ ಅಮೃತ ಭವನದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‌ಷನ್ ಸೊಸೈಟಿ ಸಹಯೋಗದಲ್ಲಿ ಸೋಮವಾರ ನಡೆದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಎಚ್‌ಐವಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ವಿಜಯಪುರ, ಬೆಳಗಾವಿ, ಬಾಗಲಕೋಟೆ ಮತ್ತು ಬೆಂಗಳೂರಿನಲ್ಲಿ ಹೆಚ್ಚು ಎಚ್‌ಐವಿ ಸೋಂಕಿತರಿದ್ದಾರೆ. ಮೈಸೂರು ಕೂಡ 15ನೇ ಸ್ಥಾನದೊಳಗಿದೆ. ಈ ನಿಟ್ಟಿನಲ್ಲಿ ಈ ಭಾಗದಲ್ಲಿ ಹೆಚ್ಚು ಜಾಗೃತಿ ಮೂಡಿಸಲಾಗುತ್ತಿದ್ದು, ಎಚ್‌ಐವಿಯನ್ನು ನಿಯಂತ್ರಿಸುವುದೇ ಸರ್ಕಾರದ ಮುಖ್ಯಗುರಿ ಎಂದು ಹೇಳಿದರು.

ಎಚ್‌ಐವಿ ಹರಡುವಿಕೆಯ ನಿಯಂತ್ರಣಕ್ಕೆ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿ ಚಟುವಟಿಕೆ ಆರಂಭಿಸಿದೆ. ವೈದ್ಯರು, ಆಶಾ ಕಾರ್ಯಕರ್ತೆಯರು ಈ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ತಪಾಸಣೆ ವೇಳೆ ಎಚ್‌ಐವಿ ಸೋಂಕು ಪತ್ತೆಯಾದ ತಕ್ಷಣ ಭಯಪಡದೆ ವೈದ್ಯರ ಬಳಿ ಚಿಕಿತ್ಸೆ ಪಡೆಯಬೇಕು. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಲಸಿಕೆ ನೀಡಲಾಗುತ್ತದೆ. ನಿಯಮಿತ ಔಷಧದಿಂದ ಆರಾಮದಾಯಕ ಜೀವನ ಸಾಗಿಸಬಹುದು. ಎಚ್‌ಐವಿ ಸೋಂಕಿತರ ಬೆಂಬಲಕ್ಕೆ ಸರ್ಕಾರ ಸದಾ ಇರಲಿದೆ ಎಂದು ಭರವಸೆ ನೀಡಿದರು.

ಇದನ್ನು ಓದಿ:  ಮುಖ್ಯಮಂತ್ರಿ ಸ್ಥಾನದಲ್ಲಿ ಸಿದ್ದರಾಮಯ್ಯ ಗಟ್ಟಿಯಾಗಿದ್ದಾರೆ: ಸಚಿವ ಎಚ್.ಸಿ.ಮಹದೇವಪ್ಪ

ಪುರುಷರಿಂದ ಪುರಷರಿಗೆ ಹರಡುವಿಕೆ ಹೆಚ್ಚು
ಯುವ ಜನರು ಹೆಚ್ಚು ಈ ಸೋಂಕಿಗೆ ತುತ್ತಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಮಾದಕ ವಸ್ತು ಸೇವನೆಯ ಸಂದರ್ಭದಲ್ಲಿ ಒಬ್ಬರಿಂದ ಒಬ್ಬರಿಗೆ ಸಿರಂಜ್ ಬಳಸುವುದು, ವಸತಿ ನಿಲಯಗಳು ಹಾಗೂ ಇತರೆ ಕಡೆಗಳಲ್ಲಿ ಸಲಿಂಗ ಕಾಮ ನಡೆಸುತ್ತಿರುವುದರಿಂದ ಯುವ ಜನರಲ್ಲಿ ಹೆಚ್ಚು ಸೋಂಕು ಪತ್ತೆಯಾಗುತ್ತಿದೆ. ಪುರುಷರಿಂದ ಪುರುಷರಿಗೆ ಹೆಚ್ಚು ಎಚ್‌ಐವಿ ಸೋಂಕಿತರಾಗಿದ್ದಾರೆ. ತೃತೀಯ ಲಿಂಗಿಗಳಲ್ಲಿಯೂ ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಸೋಂಕಿನ ಬಗ್ಗೆ ಜಾಗೃತವಾಗಿರಬೇಕು. ಸರ್ವೋಚ್ಚ ನ್ಯಾಯಾಲಯವೇ ಸಲಿಂಗ ಕಾಮ ಅಪರಾಧವಲ್ಲ ಎಂದು ಹೇಳಿದೆ. ಆದರೆ, ಸುರಕ್ಷಿತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಎಚ್‌ಐವಿ ಸೋಂಕು ಭಾರತದಲ್ಲಿ ಕಾಣಿಸಿಕೊಂಡಾಗ ಚಿಕಿತ್ಸೆ ಇರಲಿಲ್ಲ. ಆದರೆ, ಈಗ ಚಿಕಿತ್ಸೆ ಇದೆ. ಹೀಗಾಗಿ ಸೋಂಕಿತರು ಬಳಸಿಕೊಳ್ಳಬೇಕು. ತಾಯಿಯಿಂದ ಮಗುವಿಗೆ ಹರಡುವ ಸೋಂಕನ್ನು ತಡೆಯಬಹುದು. 6 ವಾರದಿಂದ 18 ತಿಂಗಳವರೆಗೆ ಮಗುವಿನ ಪರೀಕ್ಷೆ ನಡೆಸಿ ಚಿಕಿತ್ಸೆ ಸೂಕ್ತ ಕೊಡಿಸಿದರೆ ಎಚ್‌ಐವಿ ಸೋಂಕಿನಿಂದ ಮಗುವನ್ನು ರಕ್ಷಿಸಬಹುದು ಎಂದು ವಿವರಿಸಿದರು.

ರಾಜ್ಯವನ್ನು ರೋಗ ಮುಕ್ತಗೊಳಿಸಲು ಎಚ್‌ಐವಿ ಸೋಂಕಿತರು ಮೊದಲು ಚಿಕಿತ್ಸೆಗೆ ಒಳಗಾಗಬೇಕು. ಇದರ ಮೂಲಕ ಮತ್ತೊಬ್ಬರಿಗೆ ಹರಡುವುದನ್ನು ತಡೆಯಬಹುದು. ಸೋಂಕಿತರ ಪತ್ತೆ ಹೆಚ್ಚಾದಾಗ ಎಚ್‌ಐವಿ ಏಡ್ಸ್ ಆಗಿ ಪರಿವರ್ತನೆ ಆಗುವುದನ್ನು ತಡೆಯಬಹುದು ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ, ಆರೋಗ್ಯ ಮತ್ತು ಕುಟುಂಬ ಇಲಾಖೆಯ ನಿರ್ದೇಶಕ ಡಾ.ವಸಂತ ಕುಮಾರ್, ಸೊಸೈಟಿಯ ಯೋಜನಾ ನಿರ್ದೇಶಕ ಪದ್ಮ ಬಸಂತಪ್ಪ, ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್, ಜಿಲ್ಲಾ ಆರೋಗ್ಯಾಽಕಾರಿ ಡಾ.ಕುಮಾರಸ್ವಾಮಿ, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಕ ಘಟಕದ ಮುಖ್ಯಸ್ಥ ಡಾ.ಮೊಹಮ್ಮದ ಸಿರಾಜ್ ಅಹಮದ್ ಉಪಸ್ಥಿತರಿದ್ದರು.

Tags:
error: Content is protected !!