ನಂಜನಗೂಡು : ಆನೆ, ಚಿರತೆ, ಹುಲಿ ಆಯ್ತು ಈಗ ಹಂದಿ ಕಾಟ ಹೆಚ್ಚಾಗಿದ್ದು, ಕಾಡು ಹಂದಿ ದಾಳಿಗೆ ರೈತನೋರ್ವ ಬಲಿಯಾಗಿರುವ ಘಟನೆ ನಂಜನಗೂಡು ತಾಲ್ಲೂಕಿನ ಹಾಡ್ಯ ಗ್ರಾಮದಲ್ಲಿ ನಡೆದಿದೆ.
ಹುಲ್ಲಹಳ್ಳಿ ಹೋಬಳಿಯ ಹಾಡ್ಯ ಗ್ರಾಮದ ರೈತ ರಂಗಸ್ವಾಮಿ (35) ಕಾಡು ಹಂದಿ ದಾಳಿಗೆ ಬಲಿಯಾಗಿರುವ ಮೃತ ದುರ್ದೈವಿ. ಹಾಡ್ಯ ಗ್ರಾಮದಿಂದ ಬೈಕಿನಲ್ಲಿ ಹುರ ಗ್ರಾಮಕ್ಕೆ ಹೋಗಿ, ವಾಪಸ್ ಸ್ವಗ್ರಾಮಕ್ಕೆ ಬರುತ್ತಿರುವ ಸಂದರ್ಭದಲ್ಲಿ ರಸ್ತೆ ಬದಿಯ ಪೊದೆಯಲ್ಲಿ ಅಡಗಿದ್ದ ಕಾಡುಹಂದಿ ಬೈಕ್ ನಲ್ಲಿ ಬರುತ್ತಿದ್ದ ರಂಗಸ್ವಾಮಿ ಮೇಲೆ ಏಕಾಏಕಿ ದಾಳಿ ಮಾಡಿದೆ. ಕಿರುಚಾಟದ ಶಬ್ದ ಕೇಳಿ ಅಕ್ಕಪಕ್ಕದ ಸಾರ್ವಜನಿಕರು ಸ್ಥಳಕ್ಕೆ ಆಗಮಿಸಿ ನೋಡಿದಾಗ, ಕಾಡು ಹಂದಿ ಅರೆಬರೆ ತಿವಿದು, ಗಂಭೀರ ಗಾಯಗೊಳಿಸುತ್ತಿದ್ದು, ಸಾರ್ವಜನಿಕರನ್ನು ಕಂಡು ಪರಾರಿಯಾಗಿದೆ.
ಇದನ್ನೂ ಓದಿ:-ನವೆಂಬರ್ ಕ್ರಾಂತಿ ಬಗ್ಗೆ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದೇನು?
ತಕ್ಷಣವೇ ರಂಗಸ್ವಾಮಿಯನ್ನು ಮೈಸೂರಿನ ಕೆ.ಆರ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧ ಹುಲ್ಲಹಳ್ಳಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ವಿಷಯ ತಿಳಿದು ಮೈಸೂರಿನ ಕೆ.ಆರ್ ಆಸ್ಪತ್ರೆಗೆ ಹುಲ್ಲಹಳ್ಳಿ ಅರಣ್ಯ ಇಲಾಖೆ ವಿಭಾಗದ ಡಿ.ಆರ್.ಎಫ್.ಒ ವಿನೋದ್ ಕುಮಾರ್ ಮತ್ತು ಸಿಬ್ಬಂದಿ ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ಮೃತ ಕುಟುಂಬಕ್ಕೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.





