ಪಿರಿಯಾಪಟ್ಟಣ: ಜಮೀನಿನಲ್ಲಿ ದನ ಮೇಯಿಸುತ್ತಿದ್ದ ಮಹಿಳೆಯೊಬ್ಬರ ತಾಳಿಸರ ಕಿತ್ತುಕೊಂಡು ಬೈಕ್ ನಲ್ಲಿ ಪರಾರಿಯಾಗಿದ್ದ ಯುವಕನನ್ನು ಪಿರಿಯಾಪಟ್ಟಣ ಪೊಲೀಸರು ಬಂಧಿಸಿದ್ದಾರೆ.
ಪಟ್ಟಣದ ದೊಡ್ಡ ನಾಯಕರ ಬೀದಿ ನಿವಾಸಿ ತರುಣ್ ಕುಮಾರ್ ಬಂದಿತ ಆರೋಪಿಯಾಗಿದ್ದಾನೆ.
ಈತ ತಾಲ್ಲೂಕಿನ ಕಗ್ಗುಂಡಿ ಗ್ರಾಮದಲ್ಲಿ ಶುಕ್ರವಾರ ಸಂಜೆ 4:00 ಸಮಯದಲ್ಲಿ ತಮ್ಮ ಜಮೀನಿನಲ್ಲಿ ದನ ಮೇಯಿಸುತ್ತಿದ್ದ ರಾಧಾ ಎಂಬ ರೈತ ಮಹಿಳೆಯ ಕುತ್ತಿಗೆಯಲ್ಲಿದ್ದ 10 ಗ್ರಾಂ ಚಿನ್ನದ ತಾಳಿಸರವನ್ನು ಕಿತ್ತುಕೊಂಡು ತನ್ನ ಬೈಕಿನಲ್ಲಿ ಪರಾರಿಯಾಗಿದ್ದ.
ಈ ಸಂಬಂಧ ಪಟ್ಟಣದ ಪೊಲೀಸ್ ಠಾಣೆಗೆ ರಾಧಾ ದೂರು ನೀಡಿದ್ದರು.
ತಕ್ಷಣ ಕಾರ್ಯ ಪ್ರವೃತ್ತರಾದ ಪಿರಿಯಾಪಟ್ಟಣ ಪೊಲೀಸರು ಸಿಸಿ ಕ್ಯಾಮೆರಾ ದೃಶ್ಯ ಪರಿಶೀಲಿಸಿ ಆರೋಪಿಯನ್ನು ಬಂಧಿಸಿದ್ದಾರೆ.





