Mysore
21
few clouds

Social Media

ಮಂಗಳವಾರ, 20 ಜನವರಿ 2026
Light
Dark

ದಕ್ಷಿಣ ಕಾಶಿ ನಂಜನಗೂಡಿನಲ್ಲಿ ವಿಜೃಂಭಣೆಯಿಂದ ಜರುಗಿದ ಚಿಕ್ಕಜಾತ್ರೆ

ನಂಜನಗೂಡು: ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಶ್ರೀ ನಂಜುಂಡೇಶ್ವರ ಸ್ವಾಮಿ ಚಿಕ್ಕ ಜಾತ್ರಾ ಮಹೋತ್ಸವವು ಇಂದು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿತು.

ಜಾತ್ರೆಯ ಪ್ರಯುಕ್ತ ಬೆಳಿಗ್ಗೆ ಭಕ್ತರು 4 ಗಂಟೆಯಿಂದಲೇ ಕಪಿಲಾ ನದಿ ಸ್ನಾನಘಟ್ಟದಲ್ಲಿ ಪುಣ್ಯಸ್ನಾನ ಮಾಡಿ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದುಕೊಂಡರು.

ದೇವಾಲಯದ ಆಗಮಿಕ ನಾಗಚಂದ್ರ ದೀಕ್ಷಿತ್‌ ನೇತೃತ್ವದಲ್ಲಿ ಅರ್ಚಕರು ಶ್ರೀ ಗಣಪತಿ, ಶ್ರೀ ಚಂಡಿಕೇಶ್ವರ, ಪಾರ್ವತಿ ಹಾಗೂ ಶ್ರೀ ನಂಜುಂಡೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ದೇವಾಲಯದಿಂದ ಹೊರತಂದು ಮೊಗಸಾಲೆಯಲ್ಲಿರಿಸಿ ವಿದ್ಯುಕ್ತವಾಗಿ ಪೂಜೆ ಸಲ್ಲಿಸಿ ರಥದ ಸುತ್ತ ಪ್ರದಕ್ಷಿಣೆ ಹಾಕಿ 9.00 ರಿಂದ 9.30 ಗಂಟೆಗೆ ಸಲ್ಲುವ ಶುಭ ಧನುರ್‌ ಲಗ್ನದಲ್ಲಿ ಸರ್ವಾಲಂಕೃತ ರಥದಲ್ಲಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು.

ಇದನ್ನು ಓದಿ: ಸರ್ಕಾರಿ ಯೋಜನೆಗಳನ್ನು ಅರ್ಹರಿಗೆ ತಲುಪಿಸಿ : ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿರ್ದೇಶನ

ಈ ವೇಳೆ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ರಥಧ ಚಕ್ರಗಳಿಗೆ ಈಡುಗಾಯಿ ಒಡೆದು ರಥೋತ್ಸವಕ್ಕೆ ಚಾಲನೆ ನೀಡಿದರು.

ಪಾರ್ವತಿ ಸಮೇತ ಶ್ರೀ ನಂಜುಂಡೇಶ್ವರಸ್ವಾಮಿ ಒಂದು ರಥದಲ್ಲಿ ಆಸೀನರಾಗಿದ್ದರೆ, ಗಣಪತಿ ಹಾಗೂ ಚಂಡಿಕೇಶ್ವರ ಸ್ವಾಮಿಯನ್ನು ಹೊತ್ತ ಪ್ರತ್ಯೇಕ ರಥಗಳು ರಥಬೀದಿಯಲ್ಲಿ ಸಂಚರಿಸಿದವು.

ವಿವಿಧ ಬಗೆಯ ಪುಷ್ಪಗಳು ಹಾಗೂ ಬಣ್ಣ ಬಣ್ಣದ ವಸ್ತ್ರಗಳಿಂದ ಅಲಂಕೃತಗೊಂಡಿದ್ದ ಮೂರು ರಥಗಳು ನೋಡುಗರ ಕಣ್ಮನ ಸೆಳೆದವು. ಜಾತ್ರೆಯ ಅಂಗವಾಗಿ ಮಜ್ಜಿಗೆ, ಪಾನಕ ಹಾಗೂ ತಿಂಡಿ ತಿನಿಸುಗಳನ್ನು ಪ್ರಸಾದದ ರೂಪದಲ್ಲಿ ದಾನಿಗಳು ಭಕ್ತರಿಗೆ ವಿತರಿಸಿದರು. ಇಂದು ಹುಣ್ಣಿಮೆಯ ಅಂಗವಾಗಿ ಚಿಕ್ಕ ಜಾತ್ರಾ ಮಹೋತ್ಸವಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ರಥೋತ್ಸವವನ್ನು ಕಣ್ತುಂಬಿಕೊಂಡರು.

ಜಾತ್ರೆಯ ಅಂಗವಾಗಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಕಲ್ಪಿಸಲಾಗಿತ್ತು.

Tags:
error: Content is protected !!