ಮೈಸೂರು : ರಾಮಕೃಷ್ಣನಗರದಲ್ಲಿರುವ ಲಿಂಗಾಬುಧಿ ಕೆರೆ ಉದ್ಯಾನವನದಲ್ಲಿ ರೆಕ್ಕೆ-ಪುಕ್ಕದ ವತಿಯಿಂದ ಪಕ್ಷಿ ಪಿತಾಮಹ ಡಾ.ಸಲೀಂ ಆಲಿ ನೆನಪಿನಲ್ಲಿ ಆಯೋಜಿಸಿದ್ದ ಪಕ್ಷಿಗಳ ಅಪರೂಪದ ಛಾಯಾಚಿತ್ರ ಪ್ರದರ್ಶನ ಸಾರ್ವಜನಿಕರ ಗಮನ ಸೆಳೆಯಿತು.
ಪ್ರದರ್ಶನದಲ್ಲಿ ೩೫೦ಕ್ಕೂ ಹೆಚ್ಚು ಪಕ್ಷಿಗಳ ಛಾಯಾಚಿತ್ರಗಳನ್ನು ಪ್ರದರ್ಶಿಸಲಾಗಿತ್ತು. ಒಂದೊಂದು ಪಕ್ಷಿಯ ಚಲನವಲನಗಳು, ಜೀವನ ಕ್ರಮಗಳನ್ನು ಛಾಯಾಚಿತ್ರಗಳು ಬಿಚ್ಚಿಟ್ಟವು. ಈ ಕಾರ್ಯಕ್ರಮವನ್ನು ಡಿಸಿಎಫ್ ಪರಮೇಶ್ ಉದ್ಘಾಟಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು.
ನಂತರ ಮಾತನಾಡಿದ ಅವರು, ಅರಣ್ಯಗಳು ನಶಿಸಿ ಹೋಗುತ್ತಿರುವುದರಿಂದ ಕೆಲವು ಪಕ್ಷಿಗಳು ಪ್ರಕೃತಿ ಯಿಂದ ದೂರವಾಗುತ್ತಿವೆ. ಅವುಗಳನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಾಗಿದ್ದು, ಇಂತಹ ಕಾರ್ಯ ಚಟುವಟಿಕೆಗಳಿಂದ ಪಕ್ಷಿ ಸಂಕುಲ ಉಳಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಸಿಎಫ್ ರವಿಶಂಕರ್ ಮಾತನಾಡಿ, ಪ್ರಕೃತಿಯಲ್ಲಿ ನೋಡಬಹುದಾದ ಲಕ್ಷಾಂತರ ಪಕ್ಷಿಗಳಿವೆ. ಆದರೆ, ಅವುಗಳ ಸಂತತಿ ತೀರಾ ಕಡಿಮೆಯಾಗಿವೆ. ಮುಂದಿನ ಪೀಳಿಗೆಯವರಿಗೂ ಅವುಗಳನ್ನು ನೋಡಲು ಸಾಧ್ಯವಿಲ್ಲ. ಪಕ್ಷಿಗಳನ್ನು ರಕ್ಷಿಸದಿದ್ದರೆ ಕೇವಲ ಛಾಯಾಚಿತ್ರಗಳಲ್ಲಿ ಮಾತ್ರ ನೋಡಬೇಕಾದ ಸ್ಥಿತಿ ಉಂಟಾಗುತ್ತದೆ ಎಂದು ಹೇಳಿದರು.





