ಹುಣಸೂರು/ಮೈಸೂರು: ಸಾಕು ಪ್ರಾಣಿ ಹಾಗೂ ಜಾನುವಾರುಗಳನ್ನು ಹೊಂಚು ಹಾಕಿ ಕೊಂದು ಹಾಕುತ್ತಿದ್ದ ಸುಮಾರು 6 ವರ್ಷದ ಚಿರತೆ ಬೋನಿನಲ್ಲಿ ಬಂಧಿಯಾಗಿರುವ ಘಟನೆ ಹನಗೋಡಿನ ಕೊಡ್ಲೂರಿನಲ್ಲಿ ನಡೆದಿದೆ.
ಗ್ರಾಮದಲ್ಲಿ ಕಳೆದ ಕೆಲವು ದಿನಗಳಿಂದ ನಾಯಿ, ಮೇಕೆ ಸೇರಿದಂತೆ ಸಾಕು ಪ್ರಾಣಿಗಳ ಕೊಂದು ಹೊತ್ತೊಯ್ಯುತ್ತಿತ್ತು. ಶನಿವಾರ(ಆ.4) ಗ್ರಾಮದ ವಿನ್ಸೆಂಟ್ ಅವರಿಗೆ ಸೇರಿದ ಜಮೀನಿಗೆ ನುಗ್ಗಿ ಕರುವನ್ನು ಕೊಂದು ಹಾಕಿತ್ತು. ವಿನ್ಸೆಂಟ್ ನೀಡಿದ ಮಾಹಿತಿ ಮೇರೆಗೆ ಅರಣ್ಯ ಇಲಾಖೆಯ ಪ್ರಾದೇಶಿಕ ವಿಭಾಗದ ಆರ್.ಎಫ್.ಒ. ನಂದಕುಮಾರ್, ಡಿ.ಆರ್.ಎಫ್.ಒ. ಮಲ್ಲಿಕಾರ್ಜುನ್ ಭೇಟಿ ನೀಡಿ ಪರಿಶೀಲನೆ ನಡೆಸಿ ಬೋನು ಇರಿಸಿದ್ದರು. ಶನಿವಾರ ರಾತ್ರಿ ಬೋನಿನಲ್ಲಿರಿಸಿದ್ದ ನಾಯಿಯನ್ನು ತಿನ್ನುವ ಆಸೆಯಿಂದ ಒಳಹೊಕ್ಕಿದ್ದ ಚಿರತೆ ಬೋನಿನಲ್ಲಿ ಬಂಧಿಯಾಗಿದೆ.