ಮೈಸೂರು: ಅರಿಶಿನದ ನೀರಿನಲ್ಲಿ ಓಕುಳಿ ಆಡಿ ಸಂಭ್ರಮ. ನಗರಪಾಲಿಕೆಯ ನೀರಿನ ಟ್ಯಾಂಕರ್ ಮೂಲಕ ದೊಡ್ಡ ಪಾತ್ರೆಗಳಲ್ಲಿ ನೀರನ್ನು ತುಂಬಿಸಿ ಅದರೊಳಗೆ ನೈಸರ್ಗಿಕ ಬಣ್ಣಗಳನ್ನು ಅದ್ದಿದ್ದು, ಮಕ್ಕಳು ಪರಸ್ಪರ ನೀರನ್ನು ಎರೆಚುತ್ತ ಕುಣಿದು ಕುಪ್ಪಳಿಸುವ ಮೂಲಕ ಚಿಣ್ಣರ ಮೇಳಕ್ಕೆ ವರ್ಣರಂಜಿತ ತೆರೆಬಿತ್ತು.
ಎತ್ತಿನ ಬಂಡಿ ಮಾದರಿಯಲ್ಲಿ ಮಕ್ಕಳಿಂದ ಮೆರವಣಿಗೆ ನಡೆಯಿತು. ತಮಟೆ ಸದ್ದಿಗೆ ಮಕ್ಕಳು ಹುಚ್ಚೆದ್ದು ಕುಣಿದರು. ಸುಮಾರು ಒಂದು ಗಂಟೆ ಕಾಲ ಈ ಸಂಭ್ರಮ ಮುಂದುವರಿದಿದ್ದು, ಮಕ್ಕಳ ಖುಷಿ ಕಂಡು ಪೋಷಕರೂ ಆನಂದಪಟ್ಟರು. ಈ ಮೂಲಕ ಚಿಣ್ಣರ ಮೇಳಕ್ಕೆ ಸಂಭ್ರಮದ ತೆರೆ ಬಿದ್ದಿತು.
೨೬ನೇ ಚಿಣ್ಣರ ಮೇಳ ಇದಾಗಿದ್ದು, ಕಳೆದ ತಿಂಗಳ ಏ.೧೪ರಂದು ವನ್ಯಜೀವಿ ತಜ್ಞ ಕೃಪಾಕರ್ ಚಾಲನೆ ನೀಡಿದ್ದರು. ಮಕ್ಕಳಿಗಾಗಿ ಮನೋರಂಜನೆಯ ಮೂಲಕ ಕಲಿಕೆಯ ವಿವಿಧ ಚಟುವಟಿಕೆಗಳು ನಡೆದಿದ್ದು, ಅನಿಲ ರೇವೂರ ಶಿಬಿರದ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು. ಕೋಟಿಗಾನಹಳ್ಳಿ ರಾಮಯ್ಯರ ೧೨ ನಾಟಕಗಳನ್ನು ಮಕ್ಕಳು ಕಲಿತು ಅಭಿನಯಿಸಿದ್ದು ಈ ಬಾರಿಯ ಮೇಳದ ವಿಶೇಷವಾಗಿತ್ತು.