Mysore
21
overcast clouds
Light
Dark

ಚಾಲಕನ ನಿರ್ಲಕ್ಷ್ಯದಿಂದ ರಸ್ತೆಗೆ ಬಿದ್ದ ಮಗು: ಪ್ರಾಣಪಾಯದಿಂದ ಪಾರು

ಮೈಸೂರು: ಚಾಲಕ ಹಾಗೂ ಕಂಡಕ್ಟರ್‌ ಅವರ ನಿರ್ಲಕ್ಷ್ಯದಿಂದಾಗಿ ಚಲಿಸುತ್ತಿದ್ದ ಬಸ್‌ನಿಂದ ಒಂದು ಮಗು, ಇಬ್ಬರು ಮಹಿಳೆಯರು ಸೇರಿದಂತೆ ಮೂವರು ರಸ್ತೆಗೆ ಬಿದ್ದಿರುವ ಘಟನೆ ನಗರದ ರಾಮಸ್ವಾಮಿಯ ವೃತ್ತದಲ್ಲಿ ನಡೆದಿದೆ.

ಸಂಜೆ ಸುಮಾರು ೩:೩೦ರ ಸಮಯದಲ್ಲಿ ಸಿಬಿಎಸ್‌ನಿಂದ ಹೊರಟ ಬಸ್‌ ರಾಮಸ್ವಾಮಿ ವೃತ್ತದ ಮಾರ್ಗವಾಗಿ ಗದ್ದಿಗೆ ತೆರಳುತ್ತಿತ್ತು. ಬಸ್ಸಿನಲ್ಲಿ ಸುಮಾರು ಮೂರು ವರ್ಷದ ಮಗು ಸೇರಿದಂತೆ ಇಬ್ಬರು ಮಹಿಳೆಯರು ತೆರೆದ ಡೋರ್‌ ಮೂಲಕ ರಸ್ತೆಗೆ ಬಿದ್ದಿದ್ದಾರೆ. ಬಿದ್ದ ಮಗು ಸ್ಥಳದಲ್ಲೇ ಪ್ರಜ್ಞೆ ತಪ್ಪಿದೆ. ಬಸ್ಸಿನ ವೇಗ ಕಡಿಮೆ ಇದ್ದಿದ್ದರಿಂದ ಎಲ್ಲರು ಪ್ರಾಣಪಾಯದಿಂದ ಪಾರಾಗಿದ್ದಾರೆ.

ಈ ಘಟನೆ ಕಂಡಕ್ಟರ್ ಮತ್ತು ಡ್ರೈವರ್ ನಿರ್ಲಕ್ಷದಿಂದ ಸಂಭವಿಸಿದೆ ಎಂದು ಪ್ರಯಾಣಿಕರು ದೂರಿದ್ದಾರೆ. ತೆರಳುವ ಮುಂಚೆ ಬಸ್ಸಿನ ಬಾಗಿಲುಗಳನ್ನು ಮುಚ್ಚದೆ ಪ್ರಯಾಣಕ್ಕೆ ಮುಂದಾದ ಕಾರಣ ಹಾಗೂ ಮಿತಿಗೆ ಮೀರಿ ಹೆಚ್ಚಿನ ಪ್ರಯಾಣಿಕರನ್ನು ಕರೆದೊಯ್ದರಿಂದ ಈ ಅನಾಹುತ ಸಂಭವಿಸಿದೆ ಎಂದು ಬಸ್ಸಿನಲ್ಲಿದ್ದವರು ದೂರಿದ್ದಾರೆ.

ಸಾರಿಗೆ ಸಿಬ್ಬಂದಿಗಳು ಬಿದ್ದ ವ್ಯಕ್ತಿಗಳನ್ನು ಆಸ್ಪತ್ರೆಗೆ ಕರೆದೊಯ್ಯದೆ ಸ್ಥಳದಿಂದ ಬಿಟ್ಟು ಪಾರಾಗಲು ಯತ್ನಿಸಿದಾಗ ವಿದ್ಯಾರ್ಥಿಗಳು ಅವರನ್ನು ತಡೆಗಟ್ಟಿ ಸಂಚಾರ ಪೊಲೀಸರಿಗೆ ವಿಚಾರವನ್ನು ತಿಳಿಸಿದ್ದಾರೆ.

ಸ್ಥಳಕ್ಕೆ ಬಂದ ಪೊಲೀಸರು ಮಾಹಿತಿ ಪಡೆದು, ಮಧ್ಯಸ್ಥಿಕೆ ವಹಿಸಿ ಪ್ರಕರಣವನ್ನು ತಿಳಿ ಹಾಯಿಸಿದ್ದಾರೆ.

Tags: