Mysore
15
scattered clouds

Social Media

ಮಂಗಳವಾರ, 23 ಡಿಸೆಂಬರ್ 2025
Light
Dark

ವಿಪಕ್ಷಗಳ ಟೀಕೆಗೆ ʻಗ್ಯಾರಂಟಿʼ ಉತ್ತರ : ಎಂಎಲ್‌ಸಿ ತಿಮ್ಮಯ್ಯ

mlc-thimmaiah

ಮೈಸೂರು : ರಾಜ್ಯದಲ್ಲಿ ಬಿಜೆಪಿ, ಜಾ.ದಳ ಸರ್ಕಾರ ಇದ್ದಾಗ ಜನರಿಗೆ ಏನು ಮಾಡಲಿಲ್ಲ. ಈಗ ಬಿಟ್ಟಿ ಕೊಟ್ಟಿದ್ದಾರೆ ಎನ್ನುವ ಬದಲಿಗೆ ನೀವು ಏನು ಕೊಟ್ಟಿರಿ ಎಂಬುದನ್ನು ಜನರ ಮುಂದೆ ಹೇಳಬೇಕು. ಗ್ಯಾರಂಟಿ ಯೋಜನೆಗಳು, ಅಭಿವೃದ್ಧಿ ಕಾರ್ಯಗಳನ್ನು ಟೀಕಿಸುವ ಪ್ರತಿಪಕ್ಷಗಳ ನಾಯಕರಿಗೆ ತಕ್ಕ ಪ್ರತ್ಯುತ್ತರ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ ಹೇಳಿದರು.

ಮೈಸೂರು ನಗರ ಕಾಂಗ್ರೆಸ್ ಭವನದಲ್ಲಿ ಜು.18 ರಂದು ಯುವ ಕಾಂಗ್ರೆಸ್ ಪದಾಧಿಕಾರಿಗಳ ಪದಗ್ರಹಣ, 19ರಂದು ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುವ ಸಾಧನಾ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ರಾಜ್ಯ ಸರ್ಕಾರದ ಸಾಧನೆ ಮತ್ತು ಗ್ಯಾರಂಟಿ ಯೋಜನೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಬೇಕು. ರಾಜ್ಯದಲ್ಲಿ ತಂದಿರುವ ಗ್ಯಾರಂಟಿ ಯೋಜನೆಗಳನ್ನು ದೇಶದ ಯಾವುದೇ ರಾಜ್ಯಗಳು, ವಿದೇಶಗಳಲ್ಲೂ ಉಚಿತವಾಗಿ ನೀಡಿಲ್ಲ. ಎಡಪಂಥೀಯ ಸರ್ಕಾರ ಇರುವ ದೇಶಗಳಲ್ಲೂ ಉಚಿತವಾಗಿ ಯೋಜನೆಗಳನ್ನು ಜಾರಿಗೆ ತಂದಿಲ್ಲ. ಸಾರಿಗೆ ಬಸ್‌ಗಳಲ್ಲಿ 500 ಕೋಟಿ ಮಹಿಳಾ ಪ್ರಯಾಣಿಕರು ಸಂಚಾರ ಮಾಡಿದ್ದಾರೆ ಎನ್ನುವುದು ದಾಖಲೆ ಎಂದರು.

ದಲಿತ, ಹಿಂದುಳಿದ ವರ್ಗಗಳ ಬಗ್ಗೆ ಸಿದ್ಧರಾಮಯ್ಯ ಅವರಿಗೆ ಇರುವ ಬದ್ದತೆ, ಕಾಳಜಿ ಬೇರೆ ಯಾವ ನಾಯಕರಿಗೂ ಇಲ್ಲ ಎಂದರು.

ಅಪಪ್ರಚಾರ: ಶಾಸಕ ಕೆ.ಹರೀಶ್ ಗೌಡ ಮಾತನಾಡಿ, ಮೈಸೂರಿನಲ್ಲಿ ನಡೆಯುವ ಸಾಧನಾ ಸಮಾವೇಶ ರಾಜ್ಯದ ಗಮನಸೆಳೆಯಬೇಕು. ಕಾಂಗ್ರೆಸ್ ಶೇ.80 ರಷ್ಟು ಕಮಿಷನ್ ಸರ್ಕಾರ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಚಾಮರಾಜ ಕ್ಷೇತ್ರ ಒಂದಕ್ಕೆ 1900 ಕೋಟಿ ರೂಪಾಯಿ ಅನುದಾನ ಕೊಡಲಾಗಿದೆ. ಇನ್ನೂ ಬೇರೆ ಕ್ಷೇತ್ರಕ್ಕೆ ಎಷ್ಟು ಕೋಟಿ ರೂ.ನೀಡಿರಬಹುದು ಎಂದು ಪ್ರಶ್ನಿಸಿದರು.

ಸಿದ್ಧರಾಮಯ್ಯ ಒಬ್ಬ ಆರ್ಥಿಕ ತಜ್ಞ. ತಮ್ಮ ಸುದೀರ್ಘ ಅನುಭವವನ್ನು ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಕಾಂಗ್ರೆಸ್ ಶಕ್ತಿ ಪ್ರದರ್ಶನ ಆಗಬೇಕು. ಚಾಮರಾಜ ನರಸಿಂಹರಾಜ, ಕೃಷ್ಣದಾಜ ಕ್ಷೇತ್ರದಿಂದ ತಲಾ ಹದಿನೈದು ಸಾವಿರದಂತೆ 45 ಸಾವಿರ ಮಂದಿ ಸೇರಿಸಬೇಕು. ಮಂಚೇಗೌಡನಕೊಪ್ಪಲು,ನಜರ್‌ಬಾದ್,ಮೇಟಗಳ್ಳಿ, ಒಂಟಿಕೊಪ್ಪಲು, ಕುಂಬಾರಕೊಪ್ಪಲು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿಕೊಂಡು ಬಂದ ಗ್ರಾಮಗಳಾಗಿವೆ. ಪಕ್ಷದ ಮುಖಂಡರು, ಪದಾಧಿಕಾರಿಗಳು ಕೂರಲು ಐದು ಸಾವಿರ ಆಸನವನ್ನು ಕಾಯ್ದಿರಿಸಲಾಗುವುದು ಎಂದರು.

ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್ ಮಾತನಾಡಿ, ಮೈಸೂರು ನಗರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2600 ಕೋಟಿ ರೂಪಾಯಿ ಅನುದಾನ ನೀಡಿದ್ದಾರೆ. ಯುವ ಕಾಂಗ್ರೆಸ್ ಕಾರ್ಯಕ್ರಮ, ಸರ್ಕಾರದ ಸಾಧನಾ ಸಮಾವೇಶದಲ್ಲಿ ಭಾಗಿಯಾಗಬೇಕು. ಒಂದು ಲಕ್ಷ ಜನರನ್ನು ಸೇರಿಸಬೇಕು. ರಾಜ್ಯ ಕಾಂಗ್ರೆಸ್ ಸರ್ಕಾರ ಮೈಸೂರು ನಗರದ ಅಭಿವೃದ್ಧಿಗೆ ಹತ್ತು ಹಲವು ಯೋಜನೆಗಳನ್ನು ನೀಡಿದೆ. ಸರ್ಕಾರದಲ್ಲಿ ಹಣ ಇಲ್ಲವೆಂದು ಅಪಪ್ರಚಾರಮಾಡಿಕೊಂಡು ಬರುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ ಖಜಾನೆ ಖಾಲಿಯಾಗಿದೆ ಎನ್ನುವ ಪ್ರತಿಪಕ್ಷಗಳ ನಾಯಕರಿಗೆ ತಿರುಗೇಟು ನೀಡಬೇಕು. ಕಾರ್ಯಕರ್ತರು ಶಕ್ತಿ ಮೀರಿ ಜನರನ್ನು ಕರೆತರಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಾಂಗ್ರೆಸ್ ನಗರ ಅಧ್ಯಕ್ಷ ಆರ್.ಮೂರ್ತಿ, ಜುಲೈ 18 ರಂದು ಪಕ್ಷದ ಆವರಣದಲ್ಲಿ ನಡೆಯುವ ಯುವ ಕಾಂಗ್ರೆಸ್ ಪದಾಽಕಾರಿಗಳ ಪದಗ್ರಹಣ ಮತ್ತು ಜು.೧೯ ರಂದು ಕಾಂಗ್ರೆಸ್ ಸರ್ಕಾರ ನಗರಕ್ಕೆ ನೀಡಿರುವ ಯೋಜನೆಗಳ ಶಂಕುಸ್ಥಾಪನೆ ಹಮ್ಮಿಕೊಳ್ಳಲಾಗಿದೆ. ನಗರದಲ್ಲಿನ ಹೆಚ್ಚಿನ ಕಾರ್ಯಕರ್ತರು ಭಾಗವಹಿಸುವಂತೆ ಮಾಡಬೇಕು ಯುವಕರನ್ನು ಹೆಚ್ಚು ಆಕರ್ಷಿಸಬೇಕು. ಬಿಜೆಪಿ ಆಕರ್ಷಣೆಗೆ ಒಳಗಾಗಿರುವ ಯುವಕರನ್ನು ಕಾಂಗ್ರೆಸ್ ಪಕ್ಷದ ಕಡೆಗೆ ಸೆಳೆಯಬೇಕು. ಯುವಕರನ್ನು ತೊಡಗಿಸಿಕೊಳ್ಳಲು ಪ್ರೇರೇಪಿಸುವಂತೆ ರಾಹುಲ್ ಗಾಂಧಿ ಅವರು ಹೇಳಿರುವಂತೆ ನಾವು ಮಾಡಬೇಕು, ನಗರದ ಮೂರು ಕ್ಷೇತ್ರಗಳಿಂದ 15 ಸಾವಿರ ಜನರನ್ನು ಸೇರಿಸಬೇಕು ಎಂದರು.

ಕೆಪಿಸಿಸಿ ಸಂಯೋಜಕ ಎನ್.ಭಾಸ್ಕರ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂವಿಧಾನ ಸಂರಕ್ಷಕ ಬಿರುದು ಕೊಡಲು ತೀರ್ಮಾನ ಮಾಡಲಾಗಿದೆ. ಅಂಬೇಡ್ಕರ್ ಸಂವಿಧಾನ ಬರೆದರೆ, ಅದನ್ನು ಉಳಿಸುವ ಕೆಲಸವನ್ನು ಸಿಎಂ ಮಾಡುತ್ತಿದ್ದಾರೆ ಎಂದರು.

ಕಾಂಗ್ರೆಸ್ ನಗರ ಪ್ರಧಾನ ಕಾರ್ಯದರ್ಶಿ ಈಶ್ವರ್ ಚಕ್ಕಡಿ, ಮಾಜಿ ಮಹಾಪೌರರಾದ ನಾರಾಯಣ, ಅರಿಫ್ ಹುಸೇನ್, ಎಚ್.ಎನ್.ಶ್ರೀಕಂಠಯ್ಯ, ಪುಷ್ಪಲತಾ ಚಿಕ್ಕಣ್ಣ, ರಾಜೇಶ್ವರಿ, ಪುಷ್ಪಲತಾ ಜಗನ್ನಾಥ್, ಪುರುಷೋತ್ತಮ್, ಬಿ.ಕೆ.ಪ್ರಕಾಶ್, ಮಾಜಿ ಉಪ ಮಹಾಪೌರ ಬಿ.ಸಿದ್ದರಾಜು, ಶಾಂತಕುಮಾರಿ, ಇಂದಿರಾಗಾಂಧಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಚೇಗೌಡನಕೊಪ್ಪಲು ರವಿ, ಎನ್.ಎಸ್. ಗೋಪಿನಾಥ್, ನಗರಪಾಲಿಕೆ ಮಾಜಿ ಸದಸ್ಯರಾದ ಕೆ.ವಿ.ಮಲ್ಲೇಶ್, ಲೋಕೇಶ್ ಪಿಯಾ, ರಮೇಶ್ ರಾಯಪ್ಪ, ಮಂಜುನಾಥ್, ನಿತಿನ್ ಗೋಪಿ,ಮನೋಜ್,ಪಲ್ಲವಿ ಬೇಗಂ, ಜಿಪಂ ಮಾಜಿ ಸದಸ್ಯೆ ಸುಧಾ ಮಹದೇವಯ್ಯ,ಸೇವಾದಳ ಅಧ್ಯಕ್ಷ, ಎಂ.ಕೆ.ಅಶೋಕ್, ಕಾಂಗ್ರೆಸ್ ನಗರ ಹಿಂದುಳಿದ ವರ್ಗಗಳ ಅಧ್ಯಕ್ಷ ಎನ್.ಆರ್.ನಾಗೇಶ್ , ಡಿ.ನಾಗಭೂಷಣ್ ಮತ್ತಿತರರು ಹಾಜರಿದ್ದರು.

Tags:
error: Content is protected !!