ಮೈಸೂರು: ಜಿಲ್ಲೆಯ ಹುಣಸೂರು ತಾಲೂಕಿನ ನಂಜಾಪುರ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ.
ರಸ್ತೆ ಬದಿ ನಿಂತಿದ್ದ ಒಂದೂವರೆ ವರ್ಷದ ಪುಟ್ಟ ಕಂದಮ್ಮನ ಮೇಲೆ ಸ್ಕೂಲ್ ಬಸ್ ಹರಿದು ಮಗು ಮೃತಪಟ್ಟಿದ್ದಾಳೆ.
ಬಸವರಾಜು ಮತ್ತು ಕಾಂಚನ ದಂಪತಿಯ ಪುತ್ರಿ ಲತೀಕ್ಷಾ ಮೃತ ಮಗು.
ಬಸವರಾಜು ಅವರ ಮೊದಲ ಪುತ್ರ ತಿಲಕ್ ಶಾಲೆಯಿಂದ ಬಂದಿದ್ದ. ಆತನನ್ನು ಬಸ್ಸಿನಿಂದ ಇಳಿಸಿಕೊಂಡು ಮನೆಗೆ ಕರೆದೊಯ್ಯುವ ವೇಳೆ ಈ ದುರ್ಘಟನೆ ಸಂಭವಿಸಿದೆ.
ಮೊದಲ ಮಗುವನ್ನು ಮನೆಗೆ ಕರೆದೊಯ್ಯುತ್ತಿದ್ದ ಸಂದರ್ಭದಲ್ಲಿ ಸ್ಕೂಲ್ ಬಸ್ ಚಾಲಕ ಬಸ್ ರಿವರ್ಸ್ ತೆಗೆಯುತ್ತಿದ್ದ ಎನ್ನಲಾಗಿದೆ.
ಈ ವೇಳೆ ರಸ್ತೆ ಬದಿ ನಿಂತಿದ್ದ ಪುಟ್ಟ ಲತೀಕ್ಷಾ ಮೇಲೆ ಬಸ್ ಹರಿದಿದೆ. ಬಸ್ನ ಚಕ್ರ ಮಗುವಿನ ತಲೆಯ ಮೇಲೆ ಹರಿದ ಪರಿಣಾಮ ಸ್ಥಳದಲ್ಲೇ ಬಾಲಕಿ ಮೃತಪಟ್ಟಿದ್ದಾಳೆ.
ಖಾಸಗಿ ವಿದ್ಯಾಸಂಸ್ಥೆಗೆ ಸೇರಿದ ಸ್ಕೂಲ್ ಬಸ್ ಇದಾಗಿದ್ದು, ಚಾಲಕನ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎನ್ನಲಾಗಿದೆ.
ಘಟನೆ ಸಂಬಂಧ ಚಾಲಕ ಸಿದ್ದರಾಜುವನ್ನು ಬಿಳಿಕೆರೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಬಿಳಿಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.





