Mysore
22
overcast clouds
Light
Dark

ಮತಗಟ್ಟೆಗಳಲ್ಲಿ ಅಗತ್ಯವಿರುವ ಸೌಲಭ್ಯ ಕಲ್ಪಿಸಿ : ZP CEO ಕೆ.ಎಂ.ಗಾಯತ್ರಿ ಸೂಚನೆ

ಮೈಸೂರು: :ಮತಗಟ್ಟೆಗಳಲ್ಲಿ ಅಗತ್ಯವಿರುವಂತಹ ಸೌಲಭ್ಯಗಳನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಪಿಡಿಓಗಳು ಗಮನಹರಿಸಬೇಕು ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಕೆ.ಎಂ.ಗಾಯತ್ರಿ ಅವರು ಸೂಚಿಸಿದರು. 

ಇಂದು ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಪಿಡಿಓ ಹಾಗೂ ಗ್ರಂಥಪಾಲಕರಿಗೆ ಪ್ರಗತಿ ಪರಿಶೀಲನೆ ಸಭೆ ನಡೆಸಿ ಮಾತನಾಡಿದ ಅವರು, ಚುನಾವಣೆಯನ್ನು ಯಶಸ್ವಿಯಾಗಿ ನಡೆಸುವ ನಿಟ್ಟಿನಲ್ಲಿ ಜವಾಬ್ದಾರಿ ಮುಖ್ಯ. ಈ ಹಿಂದೆ ಕಡಿಮೆ ಮತದಾನವಾಗಿರವ ಮತಗಟ್ಟೆಗಳನ್ನು ಗುರುತಿಸಿ ಆ ಭಾಗದಲ್ಲಿ ಮತದಾನ ಕುರಿತು ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಬೇಕು ಎಂದರು.

ಗ್ರಂಥಪಾಲಕರು ಪಂಚಾಯಿತಿ ಸಿಬ್ಬಂದಿಯೊಂದಿಗೆ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಕೈ ಜೋಡಿಸುವ ಮೂಲಕ ಯುವಕರು, ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಮತದಾನದ ಕುರಿತು ವಿಶೇಷ ರೀತಿಯಲ್ಲಿ ಅರಿವು ಮೂಡಿಸುವ ಕಾರ್ಯವನ್ನು ಮಾಡಬೇಕು ಎಂದು ಸಲಹೆ ನೀಡಿದರು.

ಪಿಡಿಓಗಳು ಸ್ಥಳೀಯ ಸರಕಾರದ ಮುಖ್ಯಸ್ಥರಾಗಿದ್ದು, ನಿಮ್ಮ ಗ್ರಾ.ಪಂ ಸಂಬಂಧಿಸಿದಂತೆ ಎಲ್ಲಾ ಮಾಹಿತಿ ನಿಮ್ಮ ಬಳಿಯಿರಬೇಕು. ಒಗ್ಗೂಡಿಸುವಿಕೆಯ ಮೂಲಕ ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕು. ಈಗಾಗಲೇ, ಜಿಲ್ಲೆಯಾದ್ಯಂತ ಕುಡಿಯುವ ನೀರಿನ ಟ್ಯಾಂಕ್ ಹಾಗೂ ಜಾನುವಾರು ತೊಟ್ಟಿಗಳನ್ನು ಸ್ವಚ್ಛಗೊಳಿಸುವ ಆಂದೋಲನ ಆರಂಭವಾಗಿದ್ದು, ತಾಲ್ಲೂಕಿನ ಎಲ್ಲಾ ಗ್ರಾ.ಪಂಗಳಲ್ಲಿ ಕಡ್ಡಾಯವಾಗಿ ಸ್ವಚ್ಛಗೊಳಿಸುವ ಕಾರ್ಯ ಮಾಡಬೇಕು ಎಂದು ಹೇಳಿದರು.

ನರೇಗಾ ಯೋಜನೆ ಈ ವರ್ಷದ ಟಾರ್ಗೆಟ್ ಈ ವರ್ಷವೇ ಮುಗಿಸಬೇಕು. ಯಾವುದೇ ದೂರು ಕೇಳಿ ಬರದಂತೆ ಕರ್ತವ್ಯ ನಿರ್ವಹಿಸಿ. ಜಲಸಂಜೀವಿನಿ ಕಾಮಗಾರಿಗೆ ಹೆಚ್ಚಿನ ಒತ್ತು ನೀಡಿದ್ದು, ಉತ್ತಮ ಆಸ್ತಿ ಸೃಜನೆಗೆ ಹೆಚ್ಚಿನ ಒತ್ತು ಕೊಡಿ. ಗ್ರೇ ವಾಟರ್ ಮ್ಯಾನೇಜ್ಮೆಂಟ್ ಕಾಮಗಾರಿಯತ್ತ ಗಮನಹರಿಸಿ ಎಂದು ಸೂಚಿಸಿದರು.

ಜಲಜೀವನ್ ಮಿಷನ್ ಕಾಮಗಾರಿಯನ್ನು ಪರಿಶೀಲಿಸಿದ್ದು, ನೀರು ವ್ಯರ್ಥವಾಗುವುದನ್ನು ತಡೆಯುವ ನಿಟ್ಟಿನಲ್ಲಿ ಪಿಡಿಓಗಳು ಗಮನಹರಿಸಬೇಕು. ಕಾಮಗಾರಿಗಾಗಿ ರಸ್ತೆ ಕಟಿಂಗ್ ಮಾಡಿದ್ದಲ್ಲಿ ಸಂಬಂಧಪಟ್ಟ ಗುತ್ತಿಗೆದಾರರಿಗೆ ತಿಳಿಸಿ ರಸ್ತೆ ಸರಿಪಡಿಸುವ ಕಾರ್ಯಮಾಡಬೇಕು ಎಂದು ತಿಳಿಸಿದರು.

ಈ ಸಂದರ್ಭ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ಸಿ.ಆರ್.ಕೃಷ್ಣಕುಮಾರ್, ಕೆ.ಆರ್.ನಗರ ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗ ಕಾರ್ಯಪಾಲಕ ಅಭಿಯಂತರರು ವೀರೇಶ್, ಆರ್‌ಡಿಡಬ್ಲ್ಯುಎಸ್ ಎಇಇ ಕೃಷ್ಣಮೂರ್ತಿ, ಪಿಆರ್‌ಇಡಿ ಎಇಇ ಮಲ್ಲಿಕಾರ್ಜುನ್, ಎಂಜಿನಿಯರ್‌ಗಳಾದ ಪ್ರಭು, ಪಾಷಾ, ಸುಭಾಷ್, ಪಿ.ಎಸ್.ಚಿತ್ರಶ್ರೀ, ಮೇಘ, ಜೆಇ ಕೌಶಿಕ್ ಇತರರು ಉಪಸ್ಥಿತರಿದ್ದರು.


ಕಂಪಲಾಪುರ ಸರಕಾರಿ ಪ್ರೌಢಶಾಲೆಗೆ ಭೇಟಿ ನೀಡಿ ನರೇಗಾ ಯೋಜನೆಯಡಿ ಅಭಿವೃದ್ಧಿಪಡಿಸುತ್ತಿರುವ ಕಾಂಪೌಂಡ್,ಬೋಜನಾಲಯ,ಶೌಚಾಲಯ, ಆಟದ ಮೈದಾನ ಕಾಮಗಾರಿ ಪರಿಶೀಲಿಸಿದರು. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳೊಂದಿಗೆ ಪರೀಕ್ಷೆ ಹಾಗೂ ಗ್ರಾ.ಪಂಗಳಿಂದ ದೊರೆಯುವ ಸೌಲಭ್ಯ ಕುರಿತು ಸಂವಾದ ನಡೆಸಿದರು. ಕಿರನಲ್ಲಿ, ದೊಡ್ಡಬ್ಯಾಲಾಳು ಗ್ರಾ.ಪಂ ವ್ಯಾಪ್ತಿಯಲ್ಲಿ ಪಿಆರ್‌ಇಡಿ ಹಾಗೂ ಜಲಜೀವನ್ ಮಿಷನ್ ಕಾಮಗಾರಿಗಳನ್ನು ಪರಿಶೀಲಿಸಿದರು. ಅತ್ತಿಗೋಡು ಗ್ರಾ.ಪಂ ಸರಕಾರಿ ಪ್ರೌಢಶಾಲೆಗೆ ಭೇಟಿ ನೀಡಿ ನರೇಗಾ ಯೋಜನೆಯಡಿ ಅಭಿವೃದ್ಧಿಪಡಿಸುತ್ತಿರುವ ಕಾಂಪೌಂಡ್, ಮಳೆ ನೀರು ಕೂಯ್ಲು, ಆಟದ ಮೈದಾನ ಕಾಮಗಾರಿ ಪರಿಶೀಲಿಸಿದರು. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ